ಎನ್‌ಎಂಪಿಟಿ ಖಾಸಗೀಕರಣಕ್ಕೆ ಎಸ್‌ಡಿಪಿಐ ವಿರೋಧ

Update: 2019-10-13 14:31 GMT

ಮಂಗಳೂರು, ಅ.13: ಸರಕಾರಿ ಸ್ವಾಮ್ಯದ ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ)ಯನ್ನು ಖಾಸಗೀಕರಣ ಮಾಡಲು ಉದ್ದೇಶಿಸಿರುವ ಕೇಂದ್ರ ಸರಕಾರದ ಜನವಿರೋಧಿ ಕ್ರಮವನ್ನು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಮೊದಲಿಗೆ ವಿಮಾನ ನಿಲ್ಧಾಣಗಳನ್ನು ಖಾಸಗೀಕರಣ ಮಾಡಿದ ನಂತರ ಹಂತ ಹಂತವಾಗಿ ಬಿಎಸ್‌ಎನ್‌ಎಲ್, ರೈಲ್ವೆ ಈಗ ಮಂಗಳೂರಿನ ಎನ್‌ಎಂಪಿಟಿಯನ್ನು ಖಾಸಗೀಕರಣ ಮಾಡಿ ಕೇಂದ್ರ ಸರಕಾರ ತನ್ನ ಜನ ವಿರೋಧಿ ನೀತಿಯನ್ನು ಮುಂದುವರೆಸುತ್ತಲಿರುವುದು ಭಾರತವೆಂಬ ಪ್ರಜಾಪ್ರಭುತ್ವ ದೇಶದ ಪ್ರಜೆಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಅಲ್ಲದೆ ಜನರನ್ನು ಸದ್ದಿಲ್ಲದೆ ಬಂಡವಾಳಶಾಹಿತ್ವದ ಕಡೆಗೆ ಕೊಂಡೊ ಯ್ಯಲು ಕೇಂದ್ರ ಸರಕಾರ ಪ್ರಯತ್ನ ನಡೆಸುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ತಿಳಿಸಿದೆ.

ಭಾರತದ 7ನೇ ಅತಿದೊಡ್ಡ ಮತ್ತು ಕರ್ನಾಟಕದ ಏಕೈಕ ಬಂದರಾಗಿರುವ ಎನ್‌ಎಂಪಿಟಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಎನ್‌ಎಂಪಿಟಿ ನಿರ್ಮಾಣದ ವೇಳೆ ಹಲವಾರು ಮಂದಿ ಕಷ್ಟ ನಷ್ಟಗಳನ್ನು ಅನುಭವಿಸಿ ಸ್ವಂತ ಜಮೀನು ಬಿಟ್ಟು ಹೋದುದನ್ನು ಮರೆಯಲು ಸಾಧ್ಯವಿಲ್ಲ. ಒಂದು ವೇಳೆ ಖಾಸಗೀಕರಣ ಮಾಡಿದರೆ ಶೇ.80ರಷ್ಟು ದುಷ್ಪರಿಣಾಮ ಸ್ಥಳೀಯರ ಮೇಲೆ ಬೀಳಲಿದೆ. ಸಾವಿರಾರು ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯೂ ನಿರ್ಮಾಣವಾಗಲಿದೆ. ಆದ್ದರಿಂದ ಸರಕಾರದ ಜನವಿರೋಧಿ ನೀತಿಗಳನ್ನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಹೋರಾಟ ಮಾಡಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News