ಎಂಎಸ್‌ಇಝಡ್ ಮೀನು ಸಂಸ್ಕರಣ ಘಟಕದಿಂದ ದುರ್ವಾಸನೆ ಆರೋಪ: ಗ್ರಾಮಸ್ಥರಿಂದ ವಾಹನ ತಡೆದು ಪ್ರತಿಭಟನೆ

Update: 2019-10-13 14:40 GMT

ಮಂಗಳೂರು, ಅ.13: ನಿಷೇಧಕ್ಕೆ ಒಳಗಾದ ಕೈಗಾರಿಕೆ ಹಾಗೂ ಮೀನು ಸಂಸ್ಕರಣಾ ಘಟಕಗಳಿಗೆ ಎಂಎಸ್‌ಇಝಡ್‌ನಲ್ಲಿ ಅನಧಿಕೃತವಾಗಿ ಅನುಮತಿ ನೀಡಿ ಸ್ಥಳೀಯ ಜನತೆಯ ಅರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ಕಳವಾರು, ಕೊಂಚಾರು, ಬಜ್ಪೆ, ಶಾಂತಿನಗರ, ತೋಕೂರು ಗ್ರಾಮಸ್ಥರು ಎಂಎಸ್‌ಇಝಡ್ ಮುಂದೆ ರವಿವಾರ ಪ್ರತಿಭಟನೆ ನಡೆಸಿದರು.

ದುರ್ವಾಸನೆಯು ಜನರನ್ನು ಬಳಲುವಂತೆ ಮಾಡುತ್ತಿದೆ. ಭೂ, ವಾಯು, ಜಲ ಮಾಲಿನ್ಯದಿಂದ ಸ್ಥಳೀಯರು ಕಂಗೆಟ್ಟು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಎಂಎಸ್‌ಇಝಡ್‌ನಲ್ಲಿ ಭೂಮಿಕೊಳ್ಳುವವರು ಇಲ್ಲದ ಕಾರಣ ನಿಷೇಧಿತ ಕೈಗಾರಿಕೆಗಳಿಗೆ ಭೂಮಿ ನೀಡಲಾಗಿದೆ. ಜನರನ್ನು ಕತ್ತಲಲ್ಲಿಟ್ಟು ಇಲ್ಲಿನ ಸಂಸ್ಥೆಗಳು ಅಪಾಯಕಾರಿ ಮೆಡಿಸಿನ್ ತಯಾರಿಸುತ್ತಿವೆ ಎಂದು ಆರೋಪಿಸಿದರು.

ಪೆಟ್ರೋಲಿಯಂ ಉಪ ಉತ್ಪನ್ನಗಳಿಗೆ ಮೀಸಲಿಟ್ಟ ಕೈಗಾರಿಕೆಗಳಿಗೆ ಬದಲಾಗಿ ಸಮುದ್ರ ತೀರದಲ್ಲಿರಬೇಕಾದ ಮೀನು ಶುದ್ಧೀಕರಣ ಘಟಕಗಳಿಗೆ ಭೂಮಿ ನೀಡಲಾಗಿದೆ. ಮೀನಿನ ತ್ಯಾಜ್ಯದ ನೀರನ್ನು ಇಲ್ಲೇ ಬಿಡುವ ಕಾರಣ ಕೊಳೆತ ಮೀನಿನ ಗಬ್ಬು ವಾಸನೆ ಬರುತ್ತಿದೆ. ಮೀನು ಘಟಕಗಳಿಗಾಗಿ ಫಲವತ್ತಾದ ಭೂಮಿ ಇವರಿಗೆ ಬಿಟ್ಟುಕೊಡಬೇಕಿತ್ತಾ, ನಮ್ಮನ್ನು ಮೋಸಗೊಳಿಸಲಾಗಿದೆ ಎಂದು ಹಿರಿಯ ಕೃಷಿಕ ಗ್ರೆಗರಿ ಪತ್ರಾವೋ ಆರೋಪಿಸಿದರು.

ಇಲ್ಲಿನ ಬೃಹತ್ ಉದ್ದಿಮೆಗಳು ನಮ್ಮನ್ನು ವಿಷವರ್ತುಲವಾಗಿಸಿದ್ದಾರೆ. ಇದರಿಂದ ಜನರ ಆರೋಗ್ಯ ಹದೆಗೆಡುತ್ತಿದೆ. ಭೂಮಿ ಸ್ವಾಧೀನ ಸಂದರ್ಭ 12 ಲಕ್ಷ ಉದ್ಯೋಗ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಎಂಎಸ್‌ಇಝಡ್ ಅಧಿಕಾರಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಕೋಟ್ಯಾಂತರ ಹಣ ವಶಪಡಿಸಿಕೊಂಡ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು ಎಂದು ಗ್ರೆಗರಿ ಪತ್ರಾವೋ ಆಗ್ರಹಿಸಿದರು.

ಗ್ರಾಪಂ ಸದಸ್ಯ ಲೋಕೇಶ್ ಪೂಜಾರಿ ಮಾತನಾಡಿ ಮೂರು ತಿಂಗಳಿನಿಂದ ಮಾಲಿನ್ಯದ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ಮನೆಗಳಲ್ಲಿ ಮದುವೆ ಮತ್ತಿತರ ಸಮಾರಂಭ ನಡೆಸಿದರೆ ಊಟ ಮಾಡದಂತಹ ಸ್ಥಿತಿಯಿದೆ. ಸ್ಥಳೀಯ ಕಂಪೆನಿಗಳು ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುತ್ತಿರುವ ಕಾರಣ ಉತ್ತರ ಭಾರತದ ಕಾರ್ಮಿಕರೇ ಹೆಚ್ಚಿದ್ದಾರೆ. ಸಣ್ಣ ಪುಟ್ಟ ಗುತ್ತಿಗೆ ಸ್ಥಳೀಯರಿಗೆ ಸಿಗುತ್ತಿಲ್ಲ. ಭೂಮಿ ಕಳೆದುಕೊಂಡು ಸಂತ್ರಸ್ಥರಾದ ಜನತೆಗೆ ಉದ್ಯೋಗ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳವಾರು ಬಿಜೆಪಿ ವಾರ್ಡ್ ಅಧ್ಯಕ್ಷ ಗಣೇಶ್, ಲೋಕೇಶ್, ಗಿರೀಶ್, ಸುಶಾಂತ್ ಸುವರ್ಣ, ಅಶ್ವಿತ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News