ಲೋಕಸಭಾ ಚುನಾವಣೆಯಲ್ಲಿ ಶೇ.86ರಷ್ಟು ಅಭ್ಯರ್ಥಿಗಳ ಠೇವಣಿ ನಷ್ಟ!

Update: 2019-10-13 15:04 GMT

  ಹೊಸದಿಲ್ಲಿ,ಅ.14: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಶೇ.86ರಷ್ಟು ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ ಎಂದು ಲೋಕಸಭಾ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಬಗ್ಗೆ ಆಂಗ್ಲದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಈ ಬಗ್ಗೆ ಗಮನಸೆಳೆಯಲಾಗಿದೆ.

 ಈ ಸಲದ ಲೋಕಸಭಾ ಚುನಾವಣೆಯಲ್ಲಿ ಶೇ.67.4ರಷ್ಟು ಮತದಾನವಾಗಿದ್ದು ಇದು ಹಿಂದಿನ ಎಲ್ಲಾ ಲೋಕಸಭಾ ಚುನಾವಣೆಗಿಂತ ಅತ್ಯಧಿಕವೆಂದು ವರದಿ ತಿಳಿಸಿದೆ.

 ಚುನಾವಣೆ ರದ್ದುಗೊಳಿಸಲ್ಪಟ್ಟ ವೆಲ್ಲೂರು ಕ್ಷೇತ್ರವನ್ನು ಹೊರತುಪಡಿಸಿದ ಉಳಿದ 542 ಲೋಕಸಭಾ ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳ ಪೈಕಿ ಕೇವಲ 587 ಮಂದಿ ಮಾತ್ರವೇ ತಮ್ಮ ಠೇವಣಿಯನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆಂದು ವರದಿ ತಿಳಿಸಿದೆ.

 ತನ್ನ ದೀರ್ಘಕಾಲದ ಪ್ರತಿಸ್ಪರ್ಧಿಯಾದ ಸಮಾಜವಾದಿ ಪಕ್ಷದ ಜೊತೆ ಚುನಾವಣಾ ಮೈತ್ರಿಯೇರ್ಪಡಿಸಿಕೊಂಡಿದ್ದ ಬಿಎಸ್ಪಿಯು ತಾನು ಸ್ಪರ್ಧಿಸಿದ್ದ 383 ಕ್ಷೇತ್ರಗಳ ಪೈಕಿ 345ರಲ್ಲಿ ಠೇವಣಿಗಳನ್ನು ಕಳೆದುಕೊಂಡಿತು.

ಸ್ಥಾನಗಳಿಕೆಯಲ್ಲಿ ಎರಡನೆ ಸ್ಥಾನದಲ್ಲಿರುವ ಕಾಂಗ್ರೆಸ್, ತಾನು ಸ್ಪರ್ಧಿಸಿದ್ದ 421 ಲೋಕಸಭಾ ಸೀಟುಗಳ ಪೈಕಿ 148ರಲ್ಲಿ ಠೇವಣಿಗಳನ್ನು ಕಳೆದುಕೊಂಡಿದೆ.69 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಿಪಿಎಂ ಪಕ್ಷವು 51ರಲ್ಲಿ ಠೇವಣಿ ನಷ್ಟ ಅನುಭವಿಸಿದೆ. ಸಿಪಿಐ 49 ಸ್ಥಾನಗಳ ಪೈಕಿ 41ರಲ್ಲಿ ಠೇವಣಿಯನ್ನು ಕಳೆದುಕೊಂಡಿದೆ. ಎನ್‌ಸಿಪಿ ಪಕ್ಷವು ಸ್ಪರ್ಧಿಸಿದ್ದ 34 ಸ್ಥಾನಗಳ ಪೈಕಿ 14ರಲ್ಲಿ ಹಾಗೂ ತೃಣಮೂಲ ಕಾಂಗ್ರೆಗೆ 62 ಸ್ಥಾನಗಳ ಪೈಕಿ 20ರಲ್ಲಿ ಠೇವಣಿ ನಷ್ಟವಾಗಿದೆ. 303 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಗಳಿಸಿರುವ ಬಿಜೆಪಿ ಕೂಡಾ 51 ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದೆ.

 ಈ ಸಲದ ಲೋಕಭಾ ಚುನಾವಣೆಯಲ್ಲಿ ಆಯೋಗವು ಪ್ರಕಟಿಸಿರುವ ಅಂಕಿಅಂಶಗಳು ಅದರಲ್ಲೂ ವಿಶೇಷವಾಗಿ ಚತ್ತೀಸ್‌ಗಢದಲ್ಲಿ ಹಲವಾರು ಗೊಂದಲಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿಯು ಹೇಳಿದೆ. ಚತ್ತೀಸ್‌ಗಢದ ಕೆಲವು ಕ್ಷೇತ್ರಗಳಲ್ಲಿ ಆಯೋಗವು ಪ್ರಕಟಿಸಿದ ಮತದಾನದ ಶೇಕಡವಾರು ಪ್ರಮಾಣಕ್ಕಿಂತಲೂ ಅಭ್ಯರ್ಥಿಗಳ ವಿಜಯದ ಅಂತರವು ಅಧಿಕವಾಗಿರುವುದಕ್ಕೆ ಸೂಕ್ತ ವಿವರಣೆ ಲಭಿಸಿಲ್ಲವೆಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News