ಮಂಗಳೂರು: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಡಿ ಮೃತ್ಯು

Update: 2019-10-13 15:45 GMT

ಮಂಗಳೂರು, ಅ.13: ನಗರದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಬ್ಬರು ಅತ್ತಾವರ ಸಮೀಪದ ರೈಲ್ವೆ ನಿಲ್ದಾಣ ಬಳಿಯ ಲಾಡ್ಜ್‌ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾರೆ.

ಕಾಸರಗೋಡು ಜಿಲ್ಲೆಯ ಪೆರುಂಬಳ ಕೊಳಿಯಡುಕ್ಕಂ ನಿವಾಸಿ ವಿಷ್ಣು (22) ಮತ್ತು ಕಾಸರಗೋಡು ನಿವಾಸಿ ಗ್ರೀಶ್ಮಾ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು.

ಇಬ್ಬರು ಮೂಲತಃ ಕೇರಳದವರಾಗಿದ್ದು ಗ್ರೀಶ್ಮಾ ನಗರದ ಖಾಸಗಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಓದುತ್ತಿದ್ದರೆ, ವಿಷ್ಣು ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದರು. ಒಂದುವರೆ ವರ್ಷದ ಹಿಂದೆ ಪರಸ್ಪರ ಪರಿಚಯವಾಗಿ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರು ಒಪ್ಪಲಿಕ್ಕಿಲ್ಲ ಎಂದು ಭಾವಿಸಿದ ಪ್ರೇಮಿಗಳು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಅ.10ರಂದು ಅತ್ತಾವರ ಸಮೀಪದ ರೈಲ್ವೆ ಸ್ಟೇಷನ್ ಬಳಿಕ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಮನೆಯವರು ತಮ್ಮ ಪ್ರೀತಿಗೆ ಅಡ್ಡಿಯಾದಾರು ಮತ್ತು ಮದುವೆ ಮಾಡಿಕೊಡಲಾರರು ಎಂದು ನಿರ್ಧಾರಕ್ಕೆ ಬಂದು ಅದೇ ದಿನ ಜ್ಯೂಸ್‌ನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಲಾಡ್ಜ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು.

ಖಾಸಗಿ ಆಸ್ಪತ್ರೆಗೆ: ಘಟನೆಯಿಂದ ಆಘಾತಕ್ಕೀಡಾದ ವಿಷ್ಣುವಿನ ತಂದೆ ಮಂಗಳೂರಿಗೆ ಧಾವಿಸಿ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ತಡರಾತ್ರಿ 1:15ಕ್ಕೆ ವಿಷ್ಣು ಮೃತಪಟ್ಟರೆ, ರವಿವಾರ ಅಪರಾಹ್ನ 3:15ಕ್ಕೆ ಗ್ರೀಶ್ಮಾ ಮೃತಪಟ್ಟಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ವಿಷ್ಣು ಮೃತದೇಹದ ಶವಮಹಜರು ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಗ್ರೀಶ್ಮಾರ ಮೃತದೇಹ ಸೋಮವಾರ ಮಹಜರು ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೀಶ್ಮಾಳ ಬಳಿ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದಾಗ ‘ನಾವು ಪ್ರೀತಿಸುವ ವಿಷಯ ಮನೆಯವರಿಗೆ ತಿಳಿಸಲಿಲ್ಲ. ಈ ಕಾರಣದಿಂದ ಮನೆಯವರಿಗೆ ಹೆದರಿ ಈ ಕೃತ್ಯ ಎಸಗಿದ್ದೇವೆ’ ಎಂದು ತಿಳಿಸಿರುವ ಬಗ್ಗೆ ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News