ಯಶವಂತಿ ಸುವರ್ಣ- ಪಿ.ಎನ್.ಆಚಾರ್ಯಗೆ ಜಾನಪದ ಪ್ರಶಸ್ತಿ ಪ್ರದಾನ

Update: 2019-10-13 15:37 GMT

ಉಡುಪಿ, ಅ.13: ಯುವ ವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ರವಿವಾರ ಉದ್ಯಾವರ ಬಲಾಯಿಪಾದೆಯ ನಾಗಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಯುವ ವಾಹಿನಿ ಸಭಾಭವನದಲ್ಲಿ ನಡೆಯಿತು.

ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಹಿರಿಯ ಲೇಖಕಿ ಯಶವಂತಿ ಎಸ್. ಸುವರ್ಣ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಚಿತ್ರಕಲಾವಿದ ಪಿ.ಎನ್.ಆಚಾರ್ಯ ಅವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರದಾನ ಮಾಡಿದರು.

ಅಭಿನಂದನಾ ಭಾಷಣ ಮಾಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ದುಗ್ಗಪ್ಪ ಕಜೆಕಾರ್, ಅರ್ಹತೆ ಇರುವ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇಧಕ್ಕೆ ಸೇರಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಚಳವಳಿ ಈವರೆಗೆ ನಡೆದಿಲ್ಲ. ಅಲ್ಲದೆ ಅದಕ್ಕೆ ಬೇಕಾದ ತುಳು ಸಾಹಿತ್ಯ ಹಾಗೂ ಜನರ ಬಳಕೆಗೆ ಯಾವುದೇ ಪ್ರಯತ್ನ ಕೂಡ ನಡೆದಿಲ್ಲ. ಈ ನಿಟ್ಟಿನಲ್ಲಿ ಮುಂದೆ ರಾಜಕೀಯ ಪ್ರಭಾವ ಬಳಸಿಕೊಂಡು ಒಗ್ಗಟ್ಟಿನ ಹೋರಾಟ ಮಾಡಿದರೆ ತುಳು ಭಾಷೆಯನ್ನು ಎಂಟನೆ ಪರಿಚ್ಛೇಧಕ್ಕೆ ಸೇರಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಇಂದು ಕೇವಲ ಹಣ ಮಾಡುವ ಉದ್ದೇಶದಿಂದ ಸಾಕಷ್ಟು ಪ್ರಕಾಶನಗಳು ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ಯಾವುದೇ ಸಾಹಿತ್ಯ ಬೆಳವಣಿಗೆಯ ಅಭಿರುಚಿ ಇರುವುದಿಲ್ಲ ಎಂದ ಅವರು, ತುಳು ಭಾಷೆಯ ಬಗ್ಗೆ ನಿರ್ಲಕ್ಷಯ ತೋರಿದರೆ ಮುಂದಿನ ಪೀಳಿಗೆಗೆ ನಾವು ತುಳು ಭಾಷೆ, ಸಾಹಿತ್ಯ, ಶಬ್ದಗಳನ್ನು ಕೇವಲ ಇಂಟರ್‌ನೆಟ್ ನಲ್ಲಿ ತೋರಿಸುವ ಪರಿಸ್ಥಿತಿ ಬರಬಹುದು. ಆದುದರಿಂದ ತುಳು ಭಾಷೆ ಉಳಿಸುವ ನಿಟ್ಟಿನಲ್ಲಿ ಹೋರಾಟ ಅತಿಅಗತ್ಯವಾಗಿದೆ ಎಂದರು.

ಜಾನಪದದ ಬಗ್ಗೆ ಸ್ಪಷ್ಟವಾದ ಜ್ಞಾನ ಹೊಂದಿರುವವರು ಕೇವಲ ಬೆರಳೆಣಿಕೆಯ ಮಂದಿ ಮಾತ್ರ ನಮ್ಮ ಮಧ್ಯೆ ಇದ್ದಾರೆ. ಇದರಲ್ಲಿ ಬನ್ನಂಜೆ ಬಾಬು ಅಮೀನ್ ಕೂಡ ಮುಖ್ಯವಾಗುತ್ತದೆ. ಅವರು ಸತ್ಯವನ್ನು ಶೋಧಿಸಲು ಹಲವು ಸಂಶೋ ಧನೆಗಳನ್ನು ಮಾಡಿದ್ದಾರೆ. ಅವರಿಗೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ, ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಯಾವುದಾದ ರೊಂದು ಗೌರವ ಸಲ್ಲುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ನಾರಾಯಣ ಬಿ.ಎಸ್. ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಉದಯ ಅಮೀನ್ ಮಟ್ಟು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಯುವವಾಹಿನಿ ಉಡುಪಿ ಮಾಜಿ ಅಧ್ಯಕ್ಷ ಸಂತೋಶ್ ಕುಮಾರ್, ಕೋಶಾಧಿ ಕಾರಿ ಭಾರತಿ ಭಾಸ್ಕರ ಸುವರ್ಣ, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್ ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷ ಭಾಸ್ಕರ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಮಹಾಬಲ ಅಮೀನ್ ವಂದಿಸಿ ದರು. ದಯಾನಂದ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News