ಪಾಕ್ ಸಹಾಯಕ್ಕಾಗಿ ಭಾರತೀಯ ಯೋಧರನ್ನು ಕಳುಹಿಸುತ್ತೇವೆ ಎಂದ ರಾಜನಾಥ್ ಸಿಂಗ್

Update: 2019-10-13 15:39 GMT

ಚಂಡೀಗಢ, ಅ.13: ಪಾಕಿಸ್ತಾನಕ್ಕೆ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ನಿಜಕ್ಕೂ ಮನಸ್ಸಿದ್ದರೆ ಆ ದೇಶಕ್ಕೆ ನೆರವಾಗಲು ಭಾರತದ ಸೇನೆಯನ್ನು ಕಳಿಸಲು ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ಗೆ ಒಂದು ಸಲಹೆ ನೀಡಲು ಬಯಸುತ್ತೇನೆ.  ಉಗ್ರರ ವಿರುದ್ಧದ ಹೋರಾಟವನ್ನು ನೀವು ಗಂಭೀರವಾಗಿ ಪರಿಗಣಿಸುವುದಾದರೆ ನಿಮಗೆ ಸಹಾಯ ನೀಡಲು ನಾವು ಸಿದ್ಧ. ನಮ್ಮ ಸೇನೆಯ ಸಹಾಯ ಬಯಸುವಿರಾದರೆ ಸೇನೆಯನ್ನು ನಿಮ್ಮಲ್ಲಿಗೆ ಕಳಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

 ಹರ್ಯಾಣದ ಕರ್ನಾಲ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಕಾಶ್ಮೀರದ ಕುರಿತು ಇಮ್ರಾನ್ ಖಾನ್ ಅವರ ನಿಲುವನ್ನು ರಾಜನಾಥ್ ಟೀಕಿಸಿದರು. ಒಂದು ಕಡೆ ಭಾಷಣ ಮಾಡಿದ ಇಮ್ರಾನ್ ಖಾನ್, ಕಾಶ್ಮೀರ ಸ್ವತಂತ್ರವಾಗುವವರೆಗೆ ಕಾಶ್ಮೀರಕ್ಕಾಗಿನ ತಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದರು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯದ ಪ್ರಸ್ತಾವವಯನ್ನು ಮುಂದುವರಿಸುತ್ತದೆ ಎಂದಿದ್ದರು. ಆದರೆ ಇಮ್ರಾನ್ ಒಂದು ಮಾತನ್ನು ಮರೆತಿದ್ದಾರೆ. ಅವರು ಎಲ್ಲಿ ವಿಷಯ ಎತ್ತಿದರೂ ಏನೂ ಆಗುವುದಿಲ್ಲ. ಭಾರತದ ಮೇಲೆ ಯಾರೂ ಒತ್ತಡ ಹಾಕುವುದಿಲ್ಲ. ಕಾಶ್ಮೀರವನ್ನು ಮರೆತುಬಿಡಿ, ಅದರ ಬಗ್ಗೆ ನೆನಪಿಸಿಕೊಳ್ಳುವುದನ್ನೂ ಮರೆತುಬಿಡಿ ಎಂದು ರಾಜನಾಥ್ ಹೇಳಿದರು.

1947ರಲ್ಲಿ ದ್ವಿರಾಷ್ಟ್ರ ತತ್ವ ಮುಂದಿಟ್ಟು ನೀವು ಭಾರತವನ್ನು ಎರಡು ಭಾಗ ಮಾಡಿದಿರಿ. ಆದರೆ 1971ರಲ್ಲಿ ನಿಮ್ಮ ರಾಷ್ಟ್ರವೇ ಎರಡು ಭಾಗವಾಯಿತು. ಆದರೇ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಪಾಕಿಸ್ತಾನ ಮತ್ತೆ ಹೋಳಾಗುವುದನ್ನು ಯಾವುದೇ ಶಕ್ತಿ ತಡೆಯಲಾರದು. ಪಾಕಿಸ್ತಾನ ಎಸಗುವ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಇದಿರೇಟು ನೀಡಲು ಭಾರತ ಸಮರ್ಥವಾಗಿದೆ ಎಂದು ರಾಜನಾಥ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News