ನಿಧಿಯಾಗಿ ಸಿಕ್ಕಿದ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ 10ಲಕ್ಷ ರೂ. ವಂಚನೆ: ದೂರು

Update: 2019-10-13 16:25 GMT

ಕೋಟ, ಅ.13: ನಿಧಿಯಾಗಿ ಸಿಕ್ಕಿದ ಚಿನ್ನವನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ನಂಬಿಸಿ, ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 10 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಕ್ಕಟ್ಟೆಯ ಉದಯ ಮೆಂಡನ್(43) ಎಂಬವರಿಗೆ ಎರಡು ತಿಂಗಳ ಹಿಂದೆ ಮೊಬೈಲ್ ಕರೆ ಮಾಡಿದ ಮಹೇಶ್ ಎಂಬಾತ, ತನ್ನ ಬಳಿ ನಿಧಿಯಾಗಿ ಸಿಕ್ಕಿದ ಚಿನ್ನ ಇದ್ದು, ಅದನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಹೇಳಿದ್ದನು. ಅದನ್ನು ನಂಬಿದ ಉದಯ ಮೆಂಡನ್ ಆ.20ರಂದು ಹೊಸಪೇಟೆಗೆ ಹೋಗಿ ಎರಡು ಚಿನ್ನದ ನಾಣ್ಯವನ್ನು ಸ್ಯಾಂಪಲ್ ಆಗಿ ಪಡೆದುಕೊಂಡು ಬಂದಿದ್ದರು. ಅದನ್ನು ತನ್ನ ಸ್ನೇಹಿತ ಕೋಟ ಶ್ರೀದೇವಿ ಜ್ಯುವೆಲ್ಲರ್ಸ್‌ನ ಸೀತಾರಾಮ ಆಚಾರ್ಯ ಅವರಲ್ಲಿ ನೈಜತೆಯ ಬಗ್ಗೆ ಪರೀಕ್ಷಿಸಿದಲ್ಲಿ ನೈಜ ಚಿನ್ನದ ನಾಣ್ಯಗಳಾಗಿರುವುದು ಕಂಡು ಬಂತು.

ನಂತರ ಮಹೇಶ್ ಪ್ರತಿದಿನ ಕರೆ ಮಾಡಿ ಉಳಿದ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸುತ್ತಿದ್ದನು. ಉದಯ ಮೆಂಡನ್ ಹಣವಿಲ್ಲ ಎಂದು ತಿಳಿಸಿದಾಗ ಮುಂಗಡವಾಗಿ 10 ಲಕ್ಷ ರೂ. ನೀಡಿ ಉಳಿದ 15 ಲಕ್ಷವನ್ನು ಎರಡು ತಿಂಗಳ ನಂತರ ಕೊಡುವಂತೆ ಮಹೇಶ್ ತಿಳಿಸಿದನು. ಅದರಂತೆ ಉದಯ ಮೆಂಡನ್ ಹಾಗೂ ಸೀತಾರಾಮ ಆಚಾರ್ಯ ತಲಾ 5 ಲಕ್ಷಗಳಂತೆ ಒಟ್ಟು 10 ಲಕ್ಷ ರೂ. ಹೊಂದಿಸಿಕೊಂಡು ಸೆ.20ರಂದು ಚಿತ್ರ ದುರ್ಗಕ್ಕೆ ತೆರಳಿದ್ದರು.

ಅಲ್ಲಿ ಮಹೇಶ್ ಬಳಿ ಇದ್ದ ಒಂದು ಸಾವಿರಕ್ಕಿಂತ ಹೆಚ್ಚು ಚಿನ್ನದ ನಾಣ್ಯಗಳನ್ನು 10 ಲಕ್ಷ ರೂ. ನೀಡಿ ಪಡೆದುಕೊಂಡು ಬಂದಿದ್ದರು. ಊರಿಗೆ ಬಂದು ಅದರ ನೈಜ್ಯತೆಯನ್ನು ಪರೀಕ್ಷಿಸಿದಾಗ ಅವುಗಳು ನಕಲಿ ಎಂದು ತಿಳಿದು ಬಂತು. ಬಳಿಕ ಮಹೇಶ್ ಮೊಬೈಲ್ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿರುವುದಾಗಿ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News