ಕೇಂದ್ರ ಸರಕಾರದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ : ಸುನೀಲ್ ಕುಮಾರ್ ಬಜಾಲ್

Update: 2019-10-14 14:26 GMT

ಮಂಗಳೂರು, ಅ.14: ದೇಶದಲ್ಲಿ ಇತ್ತೀಚಿಗೆ ಬಲಪಂಥೀಯ ರಾಜಕೀಯವು ಭಾರೀ ಮುನ್ನಡೆಯನ್ನು ಸಾಧಿಸುತ್ತಿದ್ದು, ಅದು ವಿವಿಧ ಸ್ವರೂಪ ಗಳಲ್ಲಿ ವ್ಯಕ್ತಗೊಳ್ಳುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಧಿಕಾರದ ಮದದಿಂದ ಫ್ಯಾಸಿಸ್ಟ್ ರೂಪವನ್ನು ತಾಳುತ್ತಿದೆ. ಬೀದಿ ಬೀದಿಗಳಲ್ಲಿ ಗುಂಪು ಥಳಿತ, ಯುವತಿಯರ ಮಾನಭಂಗ, 370ನೇ ವಿಧಿ ರದ್ದತಿ, ರಾಷ್ಟ್ರೀಯ ಪೌರತ್ವ ಪಟ್ಟಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಮುಂತಾದ ವಿಷಯಗಳಿಂದಾಗಿ ಕೋಮು ಪ್ರಚೋದನೆಗೆ ಆಸ್ಪದ ನೀಡುವ ಮೂಲಕ ಅನೇಕ ಸಂಕಷ್ಟಗಳಿಂದ ತೊಂದರೆ ಗೊಳಗಾದ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ತಿರುಗಿಸಲು ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ವಿರುದ್ಧ ಎಡಪಕ್ಷಗಳು ನೀಡಿದ ಅಖಿಲ ಭಾರತ ಪ್ರತಿಭಟನೆಯ ಅಂಗವಾಗಿ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಎರಡನೆಯ ಅವಧಿಗೆ ಅಧಿಕಾರ ಬಂದರೂ ಕಪ್ಪುಹಣವನ್ನು ತರಲಿಲ್ಲ, ಭ್ರಷ್ಟಾಚಾರವನ್ನು ನಿಲ್ಲಿಸಲಿಲ್ಲ. ಒಂದೇ ದೇಶ ಒಂದೇ ತೆರಿಗೆ ಹೆಸರಲ್ಲಿ ತಂದ ಮಿತಿಮೀರಿದ ಜಿಎಸ್‌ಟಿಯಿಂದಾಗಿ ಕೈಗಾರಿಕೆಗಳು ನಷ್ಟವಾದವು. ಕಾರ್ಮಿಕರು ಕೆಲಸ ಕಳೆದುಕೊಂಡರು. ಆದರೆ ಸಂಪತ್ತು ಮಾತ್ರ ಅಧಾನಿ, ಅಂಬಾನಿಯಂತಹ ಮೋದಿಯ ಆಪ್ತರಲ್ಲಿ ಕೇಂದ್ರೀಕ್ರತವಾಗಿದೆ. ಜನರಲ್ಲಿ ಇಂದು ಕೊಂಡುಕೊಳ್ಳುವ ಶಕ್ತಿಯಿಲ್ಲ. ಯಾಕೆಂದರೆ ಅವರಿಗೆ ಉದ್ಯೋಗವಿಲ್ಲ. ಕಳೆದ ಒಂದು ವರ್ಷದಲ್ಲಿ ಒಂದೂವರೆ ಕೋಟಿ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ತೀವ್ರ ಕಳವಳ ವ್ಯಕ್ತಪಡಿಸಿದರು.

ಸಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ ದೇಶದ ಜಿಡಿಪಿ ಶೇ.6ರಷ್ಟು ಇಳಿಕೆಯಾಗಿದ್ದರೂ ಕೇಂದ್ರ ಸರಕಾರದ ಬೆಂಬಲಿಗರು ಭಾರೀ ಬೆಳವಣಿಗೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ ಜಿಲ್ಲಾ ನಾಯಕರಾದ ವಿ.ಎಸ್. ಬೇರಿಂಜ,ಎಚ್.ವಿ.ರಾವ್, ಕರುಣಾಕರ್, ಸಿಪಿಎಂ ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ವಾಸುದೇವ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News