ನಾಟೆಕಲ್-ಉರುಮಣೆ: ಗ್ರಾಮಕ್ಕೆ ಕಳಂಕವಾಗುತ್ತಿರುವ ತ್ಯಾಜ್ಯಗಳ ರಾಶಿ

Update: 2019-10-14 14:36 GMT

ಮಂಗಳೂರು, ಅ.14: ಮಂಜನಾಡಿ ಗ್ರಾಪಂ ವ್ಯಾಪ್ತಿಯ ನಾಟೆಕಲ್-ಉರುಮಣೆ ಕ್ರಾಸ್‌ನ ರಸ್ತೆಯುದ್ದಕ್ಕೂ ತ್ಯಾಜ್ಯಗಳ ರಾಶಿ ಕಂಡು ಬಂದಿದ್ದು, ಪರಿಸರ ಗಬ್ಬೆದ್ದು ನಾರುತ್ತಿದೆ. ಮಂಜನಾಡಿ ಗ್ರಾಮಕ್ಕೇ ಕಳಂಕ ಎಂಬಂತಿರುವ ಈ ತ್ಯಾಜ್ಯಗಳ ರಾಶಿಯಿಂದ ಸಾರ್ವಜನಿಕರು ಅತ್ತಿಂದಿತ್ತ ಓಡಾಡಲು ಹರಸಾಹಸಪಡಬೇಕಾಗಿದೆ.

ದೇರಳಕಟ್ಟೆ ಸಮೀಪದಲ್ಲೇ ಇರುವ ನಾಟೆಕಲ್ ಜಂಕ್ಷನ್ ಇದೀಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ. ಈ ರಸ್ತೆಗೆ ಸಂಪರ್ಕ ಕಲ್ಪಿಸುವ ಉರುಮಣೆ ಕ್ರಾಸ್ ಬಳಿ ದಿನನಿತ್ಯ ಹಸಿ ಮತ್ತು ಒಣ ತ್ಯಾಜ್ಯಗಳ ರಾಶಿಯೇ ಕಾಣಲು ಸಿಗುತ್ತಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಮತ್ತು ಜನರಿಂದ ವ್ಯಾಪಕ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಗ್ರಾಪಂ ಆಡಳಿತವು ಮೂರು ತಿಂಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರಿಗೆ ಕಸ ವಿಲೇವಾರಿಯ ಗುತ್ತಿಗೆ ವಹಿಸಿಕೊಟ್ಟಿದ್ದರು. ಅಲ್ಲದೆ ಈ ಗುತ್ತಿಗೆದಾರರು ಪ್ರತಿಯೊಂದು ಮನೆಯಿಂದ ಮಾಸಿಕ 100 ರೂ. ವಸೂಲಿ ಮಾಡುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಈ ಗುತ್ತಿಗೆದಾರರು ಕಸ ವಿಲೇವಾರಿ ಮಾಡದ ಕಾರಣ ಈ ರಸ್ತೆ ಮೂಲಕ ಹಾದು ಹೋಗುವ ಗ್ರಾಮಸ್ಥರು ಕಸವನ್ನು ಇಲ್ಲೇ ಎಸೆದು ಹೋಗುತ್ತಾರೆ. ಕಳೆದ ಎರಡು ವಾರದಿಂದ ಕಸ ವಿಲೇವಾರಿಯಾಗದೆ ರಸ್ತೆಯಲ್ಲೇ ರಾಶಿ ಬಿದ್ದಿರುವ ಕಾರಣ ಗಬ್ಬು ವಾಸನೆ ಬರುತ್ತಿದೆ. ಸಾರ್ವಜನಿಕರು, ವಾಹನ ಸವಾರರು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಇದು ಸ್ವಚ್ಛ ಭಾರತವನ್ನೇ ಅಣಕಿಸುವಂತಾಗಿದೆ.

ಈ ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ತ್ಯಾಜ್ಯವು ಸಮಸ್ಯೆಯೇ ಆಗಿರಲಿಲ್ಲ. ಆದರೆ ಇದೀಗ ಗ್ರಾಮಾಂತರವೂ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಫ್ಲಾಟ್‌ಗಳು ನಿರ್ಮಾಣಗೊಳ್ಳುತ್ತಲೇ ತ್ಯಾಜ್ಯದ ವಿಲೇವಾರಿಯು ಸಮಸ್ಯೆಯಾಗತೊಡಗಿದೆ. ಗ್ರಾಪಂ ಆಡಳಿತವು ತಡವಾಗಿ ಎಚ್ಚೆತ್ತುಕೊಂಡ ಕಾರಣ ಮತ್ತು ಈ ಬಗ್ಗೆ ಜನಜಾಗೃತಿಯೂ ಮೂಡದ ಕಾರಣ ಆಡಳಿತ ವ್ಯವಸ್ಥೆಗೆ ಇದು ಸವಾಲಾಗಿ ಪರಿಣಮಿಸಿದೆ.

ಅಂದಹಾಗೆ ಮಂಜನಾಡಿ ಗ್ರಾಪಂ ವ್ಯಾಪ್ತಿಯಲ್ಲಿ 2,369 ಮನೆಗಳಿದ್ದು, 10,401 ಜನರಿದ್ದಾರೆ. ಆ ಪೈಕಿ 550 ಮನೆಗಳಿಂದ ಮಂಗಳೂರಿನ ವ್ಯಕ್ತಿಯೊಬ್ಬರು ಸ್ವ ಆಸಕ್ತಿಯಿಂದ ಪ್ರತೀ ದಿನ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದರು. ಇದೀಗ ಈ ಗುತ್ತಿಗೆದಾರರಿಗೆ ಕೆಲವು ಮನೆಯವರು ಮಾಸಿಕ ಹಣವನ್ನು ಸರಿಯಾಗಿ ನೀಡದ ಕಾರಣ ಅವರು ನಷ್ಟಕ್ಕೀಡಾಗಿ ತ್ಯಾಜ್ಯ ಸಂಗ್ರಹಿಸುವುದನ್ನು ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ದಿನದಿಂದ ದಿನಕ್ಕೆ ನಾಟೆಕಲ್-ಉರುಮಣೆ ಕ್ರಾಸ್ ರಸ್ತೆ ಬದಿಯಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯವು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಮೂರು ತಿಂಗಳಿನಿಂದ ಖಾಸಗಿ ವ್ಯಕ್ತಿಯೊಬ್ಬರು ದಿನನಿತ್ಯ ತ್ಯಾಜ್ಯ ಸಂಗ್ರಹಿಸುತ್ತಿದ್ದರು. ಆದರೆ ಹೆಚ್ಚಿನವರು ಅವರಿಗೆ ಮಾಸಿಕ ಹಣ ನೀಡದ ಕಾರಣ ಅವರು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಹಾಗಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡು ಬಂದಿದೆ. ಇದೀಗ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಿದ್ಧತೆ ನಡೆದಿದೆ. ಆವರೆಗೆ ಸ್ವಲ್ಪ ಸಮಸ್ಯೆಯಾಗಬಹುದು. ಘಟಕ ನಿರ್ಮಾಣವಾದ ಬಳಿಕ ಈ ಸಮಸ್ಯೆ ಎದುರಾಗದು.

- ಮುಹಮ್ಮದ್ ಅಸೈ, ಅಧ್ಯಕ್ಷರು, ಮಂಜನಾಡಿ ಗ್ರಾಪಂ

ಕಳೆದೊಂದು ವಾರದಿಂದ ತ್ಯಾಜ್ಯ ಸಂಗ್ರಹ ಆಗುತ್ತಿಲ್ಲ. ತ್ಯಾಜ್ಯ ಸಂಗ್ರಹಣೆಯ ಹೊಣೆ ಹೊತ್ತ ಖಾಸಗಿ ವ್ಯಕ್ತಿ ಇದೀಗ ನಮ್ಮೆ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಅಲ್ಲಲ್ಲಿ ತ್ಯಾಜ್ಯದ ರಾಶಿ ಕಂಡು ಬಂದಿದೆ. ಶೀಘ್ರ ನಾವು ಅದನ್ನು ತೆರವುಗೊಳಿಸುತ್ತೇವೆ. ಈ ಮಧ್ಯೆ ಮಂಗಳೂರಿನ ಭರತ್ ಕಾರ್ಪೊರೇಶನ್ ಎಂಬ ಸಂಸ್ಥೆಯ ಜೊತೆ ನಾವು ತ್ಯಾಜ್ಯ ಸಂಗ್ರಹದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಅವರು ಆಸುಪಾಸಿನ ಇತರ ಐದಾರು ಗ್ರಾಪಂನ ಆಡಳಿತದೊಂದಿಗೆ ಚರ್ಚೆ ನಡೆಸಿದ್ದಾರೆ. ಎಲ್ಲರೂ ಸಹಮತ ವ್ಯಕ್ತಪಡಿಸಿದರೆ ಭರತ್ ಕಾರ್ಪೊರೇಶನ್ ತ್ಯಾಜ್ಯ ಸಂಗ್ರಹದ ಹೊಣೆ ಹೊತ್ತುಕೊಳ್ಳಬಹುದು. ಅ.22ಕ್ಕೆ ಗ್ರಾಪಂ ಆಡಳಿತ ಸಮಿತಿಯ ಸಭೆ ಇದೆ. ಆ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಜಿಪಂ ಅನುಮೋದನೆಗೆ ಕಳುಹಿಸಲಿದ್ದೇವೆ. ಅಲ್ಲಿ ಅನುಮೋದನೆ ಆದೊಡನೆ ಈ ಸಂಸ್ಥೆಯು ತ್ಯಾಜ್ಯ ಸಂಗ್ರಹ ಮಾಡಲಿದೆ.

- ಮಂಜಪ್ಪ, ಪಿಡಿಒ, ಮಂಜನಾಡಿ ಗ್ರಾಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News