ಶಿಕ್ಷಣ ದೊರೆಯುವುದು ಜನರ ಮಧ್ಯೆಯೇ ಹೊರತು ಪಠ್ಯದಲ್ಲಿ ಅಲ್ಲ: ಪ್ರೊ.ಯಡಪಡಿತ್ತಾಯ

Update: 2019-10-14 14:55 GMT

ಉಡುಪಿ, ಅ.14: ನಾಲ್ಕು ಗೋಡೆಗಳ ಮಧ್ಯೆ ತರಗತಿಯಲ್ಲಿ ಕುಳಿತು ಪಠ್ಯ ಪುಸ್ತಕ ಓದುವುದರಿಂದ ಶಿಕ್ಷಣ ಸಿಗುವುದಿಲ್ಲ. ಅವುಗಳಿಂದ ಹೊರಗೆ ಬಂದು ಜನರ ಮಧ್ಯೆ ಬಂದಾಗ ಮಾತ್ರ ನಮಗೆ ನಿಜವಾದ ಶಿಕ್ಷಣ ದೊರೆಯಲು ಸಾಧ್ಯ. ಜನರ ಕಷ್ಟ ನೋವುಗಳಿಗೆ ಸ್ಪಂದಿಸಿ ಆ ಮೂಲಕ ತೃಪ್ತಿ ಪಟ್ಟು ಸಾರ್ಥಕ್ಯ ಜೀವನ ನಡೆಸಬಹುದಾಗಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಹಾವುಗಳ ರಾಣಿ ‘ಮೆಡೂಸ’ ವೇಷ ಧರಿಸಿದ್ದ ನಮ್ಮ ಭೂಮಿಯ ರಾಮಾಂಜಿ ಸಾರ್ವಜನಿಕರು ಹಾಗೂ ದಾನಿಗಳಿಂದ ಸಂಗ್ರಹಿಸಿದ 1.5ಲಕ್ಷ ರೂ. ಮೊತ್ತವನ್ನು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಸೋಮವಾರ ಅನಾರೋಗ್ಯ ಪೀಡಿತರಿಗೆ ಸಮರ್ಪಿ ಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಮತ್ತು ಅನುಕಂಪ ತೋರಿಸುವ ಅಗತ್ಯ ಇಲ್ಲ. ಅವರಿಗೆ ಬೇಕಾದ ಅನುಭೂತಿಯನ್ನು ನಾವು ನೀಡಿದರೆ ಅವರ ಬದುಕಿನಲ್ಲಿ ಬದಲಾವಣೆ ತರಬಹುದಾಗಿದೆ. ಇತಿಹಾಸ ತಿಳಿಯದವನು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ನಮ್ಮ ಭೂಮಿ ದಿ ಕನ್ನರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್ ಇದರ ನಿವೃತ್ತ ಸಹಾಯಕ ನಿರ್ದೇಶಕ ಗಣಪತಿ ಎಂ.ಎಂ. ವಹಿಸಿದ್ದರು. ಈ ಸಂದರ್ಭದಲ್ಲಿ ಸಂಗ್ರಹವಾದ ಹಣವನ್ನು ವೈದ್ಯಕೀಯ ನೆರವಿನ ಅಗತ್ಯ ಇರುವ ಸೋನಿ ಶೆಟ್ಟಿಗಾರ್ ತ್ರಾಸಿ, ಎಂಜಿಎಂ ಕಾಲೇಜಿನ ಮಂಜುನಾಥ್, ವೈಕುಂಠ ಬಾಳಿಗ ಕಾನೂನು ಕಾಲೇಜಿನ ನೇತ್ರಾವತಿ ಅವರಿಗೆ ವಿತರಿಸಲಾಯಿತು.

ರಂಗ ಕರ್ಮಿ ಕೆ.ಎಸ್.ಶ್ರೀಧರ ಮೂರ್ತಿ ಆಶಯ ನುಡಿಗಳನ್ನಾಡಿದರು. ಜಿಲ್ಲಾಧಿಕಾರಿ ಜಿ.ಜಗದೀಶ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಜಿ.ವಿಜಯ, ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್, ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಉದ್ಯಮಿ ಗೋಪಾಲಕೃಷ್ಣ ಕಲ್ಕೂರ, ಶಿರ್ವ ಹಿಂದು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಎಸ್.ರಾವ್, ಸಾಮಾಜಿಕ ಚಿಂತಕ ಗುರುದಾಸ್, ನಮ್ಮ ಸಭಾದ ಮಾಜಿ ಅಧ್ಯಕ್ಷೆ ಬೇಬಿ ಕನ್ಯಾನ, ಕರಾವಳಿ ಯೂತ್ ಕ್ಲಬ್‌ನ ಅಧ್ಯಕ್ಷ ಅಶೋಕ್ ಕುಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ರಾಮಾಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಯಕ್ಷ ಕಲಾವಿದ ಪ್ರೊ.ಕೆ.ಜಿ.ಮಂಜುನಾಥ್ ಸ್ವಾಗತಿಸಿದರು. ಉಪನ್ಯಾಸಕ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News