ನೋಟು ರದ್ದತಿ, ಜಿಎಸ್‌ಟಿಯಿಂದ ಅರ್ಥವ್ಯವಸ್ಥೆಗೆ ಹಾನಿ: ಬಾಲಕೃಷ್ಣ ಶೆಟ್ಟಿ

Update: 2019-10-14 14:57 GMT

ಕುಂದಾಪುರ, ಅ.14: ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ವಿರುದ್ಧ ದೇಶ ದಾದ್ಯಂತ ಎಡಪಕ್ಷಗಳ ಕರೆಯಂತೆ ಹಮ್ಮಿಕೊಳ್ಳಲಾಗಿರುವ ಉಡುಪಿ ಜಿಲ್ಲಾ ಮಟ್ಟದ ಎರಡು ದಿನಗಳ ಪ್ರಚಾರ ಜಾಥಕ್ಕೆ ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ಇಂದು ಚಾಲನೆ ನೀಡಲಾಯಿತು.

ಜಾಥವನ್ನು ಉದ್ಘಾಟಿಸಿದ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ದೇಶದಲ್ಲಿ ಇಂದು ಅರ್ಥ ವ್ಯವಸ್ಥೆಯು ಒಂದು ಅತ್ಯಂತ ಗಂಭೀರ ಬಿಕ್ಕಟ್ಟಿನ ಹಿಡಿತದಲ್ಲಿ ಸಿಲುಕಿದೆ. ಉತ್ಪಾದನೆಯಲ್ಲಿ ದೊಡ್ಡ ಕಡಿತಗಳಾಗಿವೆ ಮತ್ತು ಉದ್ಯೋಗ ನಷ್ಟಗಳು ಹೆಚ್ಚುತ್ತಿವೆ. ಇದಕ್ಕೆ ಮಹಿಳೆಯರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಟೀಕಿಸಿದರು.

ನೋಟು ರದ್ದತಿ ಮತ್ತು ವ್ಯವಸ್ಥಿತವಾಗಿ ರೂಪಗೊಳ್ಳದ ಜಿಎಸ್‌ಟಿಯಿಂದಾಗಿ ಅರ್ಥವ್ಯವಸ್ಥೆಗೆ ಹಾನಿಯಾಗಿದ್ದರೂ ಕೇಂದ್ರದ ಆಳುವ ಸರಕಾರವು ಅದನ್ನು ನಿರಾಕರಿಸುತ್ತಲೇ ಇದೆ. ಹೆಚ್ಚುತ್ತಿರುವ ನಿರುದ್ಯೋಗ, ಅರೆಉದ್ಯೋಗ, ಕಡಿಮೆ ಕೂಲಿಗಳು ಮತ್ತು ಕೃಷಿ ಸಂಕಟಗಳ ಪರಿವೆಯೇ ಇಲ್ಲ. ಈ ಪ್ರಶ್ನೆಗಳನ್ನು ಎದುರಿಸುವ ಬದಲು ಕೋಮು ದ್ರುವೀಕರಣವನ್ನು ಆಳಗೊಳಿಸುವ ಮತ್ತು ಭಾವೋನ್ಮಾದಗಳನ್ನು ಬಡಿದೆಬ್ಬಿಸಿ ಜನಗಳ ಗಮನವನ್ನು ಬೇರೆಡೆಗೆ ತಿರುಗಿಸು ಪ್ರಯತ್ನ ನಡೆಯುತ್ತಿದೆ ಎಂದರು.

ದೇಶದಲ್ಲಿ ನಡೆಯುತ್ತಿರುವ ಈ ರೀತಿಯ ಹಲವು ಆತಂಕಕಾರಿ ವಿದ್ಯಾಮಾನ ಗಳಿಗೆ ಜನತೆಯ ಸಮ್ಮತಿ ಇಲ್ಲ ಎಂಬುವುದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು. ಬಲಪಂಥದ ಸವಾಲನ್ನು ರಾಜಕೀಯ ಎಡಪಂಥ ಮಾತ್ರ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಜಿ.ಡಿ.ಪಂಜು, ರವಿ ವಿ.ಎಂ ಮೊದಲಾದವರು ಉಪಸ್ಥಿತ ರಿದ್ದರು. ಬಳಿಕ ಜಾಥವು ಉಪ್ಪುಂದ, ಬೈಂದೂರು, ಮರವಂತೆ, ನಾಡ, ಪಡು ಕೋಣೆ, ಹೆಮ್ಮಾಡಿ, ಗುಲ್ವಾಡಿ, ಕಂಡ್ಲೂರು, ಬಸ್ರೂರು, ತೆಕ್ಕಟ್ಟೆ, ಕೋಟೇಶ್ವರ ಗಳಲ್ಲಿ ಸಂಚರಿಸಿ ಕುಂದಾಪುರದಲ್ಲಿ ಸಮಾಪ್ತಿಗೊಂಡಿತು.

ಅ.15ರಂದು ಪ್ರಚಾರ ಜಾಥವು ಉಡುಪಿ ತಾಲೂಕಿನಾದ್ಯಂತ ಸಂಚರಿಸ ಲಿದ್ದು, ಸಂಜೆ 4:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News