ಕಸ್ಟಡಿಯಲ್ಲಿ ವ್ಯಕ್ತಿ ಸಾವು: ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಚ್ಚಿದ ಆಕ್ರೋಶಿತರು

Update: 2019-10-14 14:59 GMT

ಕೋಲ್ಕತ್ತಾ,ಅ.14: ಜೂಜಾಟದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ 50ರ ಹರೆಯದ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯಿಂದ ಆಕ್ರೋಶಗೊಂಡ ಜನರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡ ಜಿಲ್ಲೆಯಲ್ಲಿ ರವಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು ಜೂಜಾಟದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಇತರ ಏಳು ಮಂದಿ ಈ ಎಲ್ಲ ಗದ್ದಲದ ಮಧ್ಯೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹದಿನೈದು ಮಂದಿಯನ್ನು ಬಂಧಿಸಲಾಗಿದ್ದು ಇತರರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ರಜೋರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 50ರ ಹರೆಯದ ಐನುಲ್ ಖಾನ್ ಸೇರಿದಂತೆ ಎಂಟು ಮಂದಿಯನ್ನು ರವಿವಾರ ಜೂಜಾಟದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಮಧ್ಯೆ ಐನುಲ್ ಖಾನ್ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಮಿಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ ವೈದ್ಯರು ಮಾಲ್ಡದ ಆಸ್ಪತ್ರೆಗೆ ಕೊಂಡೊಯ್ಯಲು ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯನ್ನು ಸುತ್ತುವರಿದ ಐನುಲ್ ಖಾನ್ ಸಂಬಂಧಿಕರು ಮತ್ತು ಸ್ಥಳೀಯರು ಖಾನ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಮಾಲ್ಡಕ್ಕೆ ಕೊಂಡೊಯ್ಯುತ್ತಿರುವುದು ನಾಟಕವಾಗಿದೆ ಎಂದು ಆರೋಪಿಸಿದ್ದರು.

ರಾತ್ರಿ 11 ಗಂಟೆಗೆ ಐನುಲ್ ಖಾನ್ ಸಾವನ್ನಪ್ಪಿದಾಗ ನೆರೆದಿದ್ದ ಗುಂಪು ಆಕ್ರೋಶಗೊಂಡು ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಗಾಯಗೊಂಡ ಪೊಲೀಸರ ಪೈಕಿ ಉಪನಿರೀಕ್ಷಕರೊರ್ವರ ತಲೆಗೆ ಗಂಭೀರ ಗಾಯವಾಗಿದ್ದು ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News