ಮರಳು ಸಮಸ್ಯೆ: ಗುಜರಾತ್‌ಗೆ ಶಾಸಕರ ನಿಯೋಗ

Update: 2019-10-14 15:00 GMT

ಉಡುಪಿ, ಅ. 14: ರಾಜ್ಯ ಕರಾವಳಿಯ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಇರುವ ಸಮಸ್ಯೆಗಳನ್ನು ನಿವಾರಿಸಲು ಗುಜರಾತ್‌ನಲ್ಲಿ ಅನುಸರಿಸುತ್ತಿರುವ ಕ್ರಮದ ಕುರಿತು ಪರಿಶೀಲಿಸಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಲು ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದ ನಿಯೋಗವೊಂದು ಇಂದು ಗುಜರಾತ್ ರಾಜ್ಯ ಪ್ರವಾಸ ಕೈಗೊಂಡಿದೆ.

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ರಾಜ್ಯದ ಮರಳು ಸಮಸ್ಯೆಗಳ ವಿಚಾರ, ನಾನ್ ಸಿಆರ್‌ಝಡ್‌ನಲ್ಲಿ ಮರಳು ತೆಗೆಯುವ ಅವಕಾಶದ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಭಟ್ ಹಾಗೂ ಸುನಿಲ್‌ಕುಮಾರ್ ಚರ್ಚೆ ನಡೆಸಿದರು.

ಗುಜರಾತ್‌ನ ಗಣಿ ಇಲಾಖೆಯ ಆಯುಕ್ತರಾದ ಅರುಣ್ ಕುಮಾರ್ ಸೋಲಂಕಿ ಹಾಗೂ ಇತರೆ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ನಾನ್ ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಗುಜರಾತಿನಲ್ಲಿ ಸಾಕಷ್ಟು ಅವಕಾಶ ಗಳಿವೆ ಎಂದು ಅವರು ಕರ್ನಾಟಕದ ನಿಯೋಗಕ್ಕೆ ವಿವರಿಸಿದರು.

ಗುಜರಾತ್‌ನ ಎಲ್ಲಾ ನಿಯಮ, ರೀತಿನೀತಿಗಳ ಬಗ್ಗೆ ಅಧ್ಯಯನ ನಡೆಸಿ ಇದರ ವಿಸ್ತೃತವಾದ ವರದಿಯನ್ನು ಕರ್ನಾಟಕ ಸರಕಾರಕ್ಕೆ ಒಪ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಗುಜರಾತಿನಲ್ಲಿ ಇರುವ ಮರಳು ನೀತಿಯನ್ನು ಕರ್ನಾಟಕ ದಲ್ಲಿ ಅಳವಡಿಸುವ ಮೂಲಕ ರಾಜ್ಯದಲ್ಲಿ ಬಾಧಿಸುತ್ತಿರುವ ಮರಳು ಸಮಸ್ಯೆ ಯನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿದೆ ಎಂದು ನಿಯೋಗ ಅಭಿಪ್ರಾಯ ಪಟ್ಟಿದೆ.

ಈ ನಿಯೋಗದಲ್ಲಿ ಕರ್ನಾಟಕದ ಗಣಿ ಮತ್ತು ಭೂಗರ್ಭ ಇಲಾಖೆಯ ಹಿರಿಯ ಅಧಿಕಾರಿಗಳಾದ ಶಿವಶಂಕರ್ ರೆಡ್ಡಿ, ರಾಮ್ಜೀ ನಾಯ್ಕ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News