ಅಸ್ಸಾಂ: ಬಂಧನ ಕೇಂದ್ರದಲ್ಲಿದ್ದ ವ್ಯಕ್ತಿಯ ಸಾವು

Update: 2019-10-14 15:10 GMT

 ಗುವಾಹಟಿ,ಅ.14: ಅಸ್ಸಾಮಿನಲ್ಲಿಯ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿರಿಸಲಾಗಿದ್ದ ದುಲಾಲ ಪಾಲ್(65) ಎನ್ನುವವರು ರವಿವಾರ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪಾಲ್ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರು ಮತ್ತು ಆರೋಗ್ಯ ಹದಗೆಟ್ಟಿದ್ದರಿಂದ ಸೆ.28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪಾಲ್ ಅವರ ಒಡಹುಟ್ಟಿದವರು ಮತ್ತು ಅವರ ಕುಟುಂಬದವರ ಹೆಸರುಗಳು ಎನ್‌ಆರ್‌ಸಿಯಲ್ಲಿವೆ. ನಮ್ಮ ಕುಟುಂಬವು 1960ರ ದಶಕದಲ್ಲಿಯ ಭೂದಾಖಲೆಗಳನ್ನು ಹೊಂದಿದೆ. ಆದರೂ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಬಂಧನದಲ್ಲಿರಿಸಲಾಗಿತ್ತು ಎಂದು ಅವರ ಸೋದರ ಪುತ್ರ ಸಾಧನ್ ಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಸೋನಿತಪುರ ಜಿಲ್ಲೆಯ ಅಲಿಸಿಂಗಾ ಗ್ರಾಮದ ನಿವಾಸಿಯಾದ ಪಾಲ್ ಅ.11,2017ರಿಂದ ತೇಝಪುರದ ಬಂಧನ ಕೇಂದ್ರದಲ್ಲಿದ್ದರು.

ಕಳೆದ ಜುಲೈನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಉತ್ತರದಲ್ಲಿ ಸರಕಾರವು ಬಂಧನ ಕೇಂದ್ರಗಳಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಪಟ್ಟಿಯನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಮೃತ 25 ಜನರಲ್ಲಿ 45 ದಿನಗಳ ಮಗು ಮತ್ತು 85 ವರ್ಷಪ್ರಾಯದ,ನಡೆದಾಡಲೂ ಸಾಧ್ಯವಿಲ್ಲದಿದ್ದ ವ್ಯಕ್ತಿ ಸೇರಿದ್ದರು.

ಇವರೆಲ್ಲ ವಿವಿಧ ಅನಾರೋಗ್ಯಗಳಿಂದಾಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದರು ಎಂದು ಸಚಿವ ಚಂದ್ರಮೋಹನ ಪಟವಾರಿ ಅವರು ಹೇಳಿದ್ದರಾದರೂ,ಅವರು ಬಂಧನ ಕೇಂದ್ರಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಕಿರುಕುಳಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕೆಲವು ಕುಟುಂಬ ಸದಸ್ಯರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News