ಅಮೆರಿಕದಲ್ಲಿ ನಡೆದ ಕೌಟುಂಬಿಕ ಹಿಂಸೆ ಪ್ರಕರಣಗಳ ವಿಚಾರಣೆ ಮುಂಬೈನಲ್ಲಿ ನಡೆಸಬಹುದು: ಹೈಕೋರ್ಟ್

Update: 2019-10-14 15:12 GMT

ಮುಂಬೈ,ಅ.14: ಅಮೆರಿಕದಲ್ಲಿ ನಡೆದ ಕೌಟುಂಬಿಕ ಹಿಂಸೆಯ ಪ್ರಕರಣಗಳ ವಿಚಾರಣೆಯನ್ನು ಮುಂಬೈನಲ್ಲಿ ದಂಡಾಧಿಕಾರಿಯೋರ್ವರು ನಡೆಸಬಹುದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಈ ಪ್ರಕರಣಗಳು ಯಾವುದೇ ಕಾಲಮಿತಿಯನ್ನು ಹೊಂದಿಲ್ಲ ಎಂದು ಹೇಳಿರುವ ನ್ಯಾಯಾಲಯವು,ಅಮೆರಿಕದಲ್ಲಿ ನೆಲೆಸಿರುವ ಐಟಿ ವೃತ್ತಿಪರ ಮುಹಮ್ಮದ್ ಝುಬೇರ್ ಫಾರೂಕಿ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

 2008ರಲ್ಲಿ ವಿವಾಹದ ಬಳಿಕ ಫಾರೂಕಿ ದಂಪತಿ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. ಎರಡು ವರ್ಷಗಳ ಬಳಿಕ ಕ್ಯಾಲಿಫೋರ್ನಿಯಾದ ಸುಪೀರಿಯರ್ ಕೋರ್ಟ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಫಾರೂಕಿ,ಮಗುವನ್ನು ತನ್ನ ವಶಕ್ಕೆ ನೀಡುವಂತೆ ಕೋರಿದ್ದರು. ಫಾರೂಕಿಯವರ ಪತ್ನಿ ಭಾರತದಲ್ಲಿ ಅವರ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣವನ್ನು ದಾಖಲಿಸಿದ್ದರು.

ಇಲ್ಲಿಯ ಮುಲುಂಡ್ ದಂಡಾಧಿಕಾರಿಗಳ ನ್ಯಾಯಾಲಯವು ಪತ್ನಿಗೆ 30,000 ರೂ. ಮತ್ತು ಮಗನಿಗೆ 15,000 ರೂ.ಗಳ ಮಧ್ಯಂತರ ಜೀವನಾಂಶಗಳನ್ನು ಪಾವತಿಸುವಂತೆ ಫಾರೂಕಿಗೆ ಆದೇಶಿಸಿತ್ತು. ಫಾರೂಕಿ ಇದನ್ನು ಸೆಷನ್ಸ್ ಮತ್ತು ಬಾಂಬೆ ಉಚ್ಚ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದರು.

ದೂರು ಸಲ್ಲಿಸುವಲ್ಲಿ ಎರಡು ವರ್ಷಗಳ ವಿಳಂಬವಾಗಿದೆ ಮತ್ತು ಇದೊಂದೇ ಕಾರಣದಲ್ಲಿ ನ್ಯಾಯಾಲಯವು ದೂರನ್ನು ವಜಾಗೊಳಿಸಬೇಕು ಎಂದು ಫಾರೂಕಿ ಪರ ನ್ಯಾಯವಾದಿ ವಾದಿಸಿದ್ದರು. ಅಲ್ಲದೆ ಆರೋಪಿಸಲಾಗಿರುವ ಕೌಟುಂಬಿಕ ಹಿಂಸೆಯು ಅಮರಿಕದಲ್ಲಿ ನಡೆದಿರುವುದರಿಂದ ಪ್ರಕರಣದ ವಿಚಾರಣೆೆಯನ್ನು ನಡೆಸಲು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂದೂ ಅವರೂ ಹೇಳಿದ್ದರು.

ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಸಂಭಾಜಿ ಶಿಂಧೆ ಅವರು,ಆದೇಶವನ್ನು ಪಾಲಿಸಲು ಮತ್ತು ಜೀವನಾಂಶ ಪಾವತಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News