ಕಬ್ಬಿನ ಬೆಳೆ ಆಸಕ್ತರು ಅ. 30ರೊಳಗೆ ನೊಂದಾಯಿಸಿಕೊಳ್ಳಲು ಭಾಕಿಸಂ ಕರೆ

Update: 2019-10-14 15:38 GMT

ಕುಂದಾಪುರ, ಅ.14: ಭತ್ತಕ್ಕೆ ಪರ್ಯಾಯವಾಗಿ ಕಬ್ಬಿನ ಬೆಳೆ ಬೆಳೆಯಲು ಜಿಲ್ಲೆಯ ರೈತರು ಆಸಕ್ತಿ ವ್ಯಕ್ತಪಡಿಸಿದ್ದು, ಹೊಸದಾಗಿ ಕಬ್ಬಿನ ನಾಟಿ ಮಾಡಲು ಆಸಕ್ತಿ ಇರುವ ರೈತರು ಅ.30ರೊಳಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿರುವ ಕಚೇರಿಯನ್ನು ಅಥವಾ ಭಾಕಿಸಂನ್ನು ಸಂಪರ್ಕಿಸಿ, ತಮಗೆ ಅಗತ್ಯವಾದ ಬೀಜವನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಭಾಕಿಸಂ ಹೇಳಿದೆ.

ಅಧ್ಯಕ್ಷ ಸೀತಾರಾಮ ಗಾಣಿಗರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಈಗಾಗಲೇ ಬ್ರಹ್ಮಾವರ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆಯ ಮೂಲಕ ಬೀಜಕ್ಕಾಗಿ 80 ಎಕರೆ ಪ್ರದೇಶದಲ್ಲಿ ಉತ್ತಮ ತಳಿಯ ಕಬ್ಬನ್ನು ನಾಟಿ ಮಾಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಕಬ್ಬು ಕಟಾವಿಗೆ ಸಿದ್ಧವಾಗಲಿದೆ. ಇದರಿಂದ ಈ ಬಾರಿ ಸುಮಾರು 2000 ಎಕರೆ ಪ್ರದೇಶದಲ್ಲಿ ಕಬ್ಬಿನ ನಾಟಿ ಮಾಡಲು ಅಗತ್ಯ ಬೀಜ ಲಭ್ಯವಾಗಲಿದೆ. ವಾರಾಹಿ ನೀರಾವರಿ ಯೋಜನೆಯ ಮೂಲಕ ಜಿಲ್ಲೆಯಲ್ಲಿ 18ರಿಂದ 20ಸಾವಿರ ಎಕರೆ ಪ್ರದೇಶಕ್ಕೆ ನೀರಿನ ಸರಬರಾಜಾಗಲಿದೆ. ಇದರಲ್ಲಿ 8ರಿಂದ 10ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬನ್ನು ಬೆಳೆದರೆ ಹೊಸ ಆಧುನಿಕ ತಂತ್ರಜ್ಞಾನದ ಕಬ್ಬಿನ ಕಾರ್ಖಾನೆ ಪ್ರಾರಂಭಿಸಿ, ನಷ್ಟವಿಲ್ಲದ ರೀತಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ಸಭೆುಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಕಬ್ಬಿನ ಬೆಳೆಬೆಳೆಯುವುದರಿಂದ ರೈತರಿಗೆ ಪ್ರತಿ ಎಕರೆಗೆ ಕನಿಷ್ಟ 40 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಲಿದೆ. ರೈತರು ಹೆಚ್ಚಿನ ಭೂಮಿಗಳನ್ನು ಹಡಿಲು ಬಿಡುವ ಬದಲು ಅದರಲ್ಲಿ ಕಬ್ಬಿನ ಬೆಳೆಗೆ ಮುಂದಾಗಬೇಕೆಂದು ಸಮಿತಿ ರೈತರಿಗೆ ಕರೆ ನೀಡಿದೆ.

ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರಾದ ದಿನಕರ ಶೆಟ್ಟಿ ಮಾತಾನಾಡಿ, ಈಗಾಗಲೇ ಬೆಳೆದ ರೈತರ ಕಬ್ಬನ್ನು ಕಟಾವು ಮಾಡಿ ಮಾರಾಟಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಎಲ್ಲಾ ತೀರ್ಮಾನ ಕೈಗೊಂಡಿದೆ. ಹೊಸದಾಗಿ ಕಬ್ಬಿನ ನಾಟಿ ಮಾಡಲು ಆಸಕ್ತಿಯಿರುವ ರೈತರು ಅ.30ರೊಳಗೆ ತಮಗೆ ಅಗತ್ಯವಿರುವ ಬೀಜವನ್ನು ಕಾಯ್ದಿರಿಸಿಕೊಳ್ಳಬೇಕು ಎಂದರು.

ಉಳಿದ ಕಬ್ಬನ್ನು ವಿಲೇವಾರಿಗೆ ಆಡಳಿತ ಮಂಡಳಿ ಈಗಾಗಲೇ ಕ್ರಮ ಕೈಗೊಂಡಿದೆ. ಕಬ್ಬನ್ನು ಬೆಳೆದ ರೈತರಿಗೆ ಸಕಾಲದಲ್ಲಿ ಕಟಾವಾಗಿ ಹಣ ಸಿಗುವಂತಾಗಲು ಅಗತ್ಯ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇವೆ. ರೈತರು ಹೊಸ ಕಾರ್ಖಾನೆಗೆ ಅಗತ್ಯವಿರುವಷ್ಟು ಕಬ್ಬನ್ನು ಬೆಳೆದು ತೋರಿಸಿದರೆ, ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರು, ಸರಕಾರ ಎಲ್ಲರಿಂದ ರೈತರಿಗೆ ಅಗತ್ಯವಿರುವ ತೀರ್ಮಾನಕ್ಕೆ ಸ್ಪಂದಿಸುವುದಾಗಿ ಭರವಸೆ ಸಿಕ್ಕಿದೆ. ಅಲ್ಲದೇ ಭತ್ತದ ಕೃಷಿಗೆ ಕಂಟಕವಾಗಿರುವ ಜಿಂಕೆ, ಹಂದಿ, ನವಿಲುಗಳ ಉಪಟಳ ಕಬ್ಬಿನ ಬೆಳೆಗೆ ಇಲ್ಲವೇ ಇಲ್ಲ. ಉಳಿದ ಕಾಡುಪ್ರಾಣಿಗಳಿಂದ ಸ್ವಲ್ಪಮಟ್ಟಿನ ತೊಂದರೆ ಇದ್ದರೂ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಇರುವುದಿಲ್ಲ ಎಂದು ದಿನಕರ ಶೆಟ್ಟಿ ವಿವರಿಸಿದರು.

ಭಾಕಿಸಂನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ಈ ಬಾರಿಯ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಉತ್ತಮ ಪರಿಹಾರ ದೊರೆತಿದೆ. ಈವರೆಗೆ ಜಿಲ್ಲೆಯ 929 ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿರುವ ಮಾಹಿತಿ ಸಿಕ್ಕಿದೆ. ಉಳಿದಂತೆ ಸುಮಾರು 1700ಕ್ಕೂ ಹೆಚ್ಚು ರೈತರ ಖಾತೆಗೆ ಮುಂದಿನ ಒಂದು ವಾರದಲ್ಲಿ ಪರಿಹಾರದ ಹಣ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ಪಡೆಯಲು ಕಿಸಾನ್ ಸಂಘದ ಕಛೇರಿಗೆ ಭೇಟಿ ನೀಡಬಹುದು. ಅಲ್ಲದೆ ಈ ಬಾರಿ ಅಡಿಕೆ ಕೊಳೆರೋಗದಿಂದ ಬೆಳೆ ನಷ್ಟ ಅನುಭವಿಸಿದ ರೈತರು ಪರಿಹಾರ ಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಬೇಕು. ಹಿಂದಿನ ವರ್ಷದ ಪರಿಹಾರ ಬಾರದ ರೈತರಿಗೂ ಪರಿಹಾರ ಪಡೆಯುವ ಬಗ್ಗೆ ಸಂಘದಿಂದ ಸಾಧ್ಯವಾದ ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಅಧ್ಯಕ್ಷ ವೆಂಕಟೇಶ್ ರಾವ್ ಉಪಸ್ಥಿತ ರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಯಡಿಯಾಳ್ ಸ್ವಾಗತಿಸಿದರೆ ಕೋಶಾಧಿಕಾರಿ ಅನಂತ ಪದ್ಮನಾಭ ಉಡುಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News