ಸುಳ್ಳು ಆರೋಪ: 19 ವರ್ಷ ಜೈಲಿನಲ್ಲಿ ಕಳೆದವನಿಗೆ ಸಿಕ್ಕ ಪರಿಹಾರ ಎಷ್ಟು ಕೋ.ರೂ. ಗೊತ್ತಾ?

Update: 2019-10-14 17:31 GMT

ಸಿಡ್ನಿ (ಆಸ್ಟ್ರೇಲಿಯ), ಅ. 14: ಉನ್ನತ ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಂದ ಸುಳ್ಳು ಆರೋಪದಲ್ಲಿ ಸುಮಾರು ಎರಡು ದಶಕಗಳನ್ನು ಜೈಲಿನಲ್ಲಿ ಕಳೆದ ಆಸ್ಟ್ರೇಲಿಯದ ಅರ್ಥಶಾಸ್ತ್ರಜ್ಞರೊಬ್ಬರಿಗೆ ಸೋಮವಾರ 7 ಮಿಲಿಯ ಆಸ್ಟ್ರೇಲಿಯ ಡಾಲರ್ (ಸುಮಾರು 34 ಕೋಟಿ ರೂಪಾಯಿ) ಪರಿಹಾರ ನೀಡಲಾಗಿದೆ.

ಆಸ್ಟ್ರೇಲಿಯದ ಫೆಡರಲ್ ಪೊಲೀಸ್ ಅಧಿಕಾರಿ ಕಾಲಿನ್ ವಿಂಚೆಸ್ಟರ್‌ರನ್ನು ಕೊಂದ ಆರೋಪದಲ್ಲಿ 1995ರಲ್ಲಿ ಮಾಜಿ ಸರಕಾರಿ ಅಧಿಕಾರಿ ಡೇವಿಡ್ ಈಸ್ಟ್‌ಮನ್‌ರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು.

ನಾನು ಅಮಾಯಕ ಎಂಬುದಾಗಿ ಈಸ್ಟ್‌ಮನ್ ಪ್ರತಿಪಾದಿಸುತ್ತಲೇ ಬಂದಿದ್ದರು ಹಾಗೂ ಹಲವಾರು ಮೇಲ್ಮನವಿಗಳನ್ನು ಸಲ್ಲಿಸಿದ್ದರು. 2014ರಲ್ಲಿ ಅವರ ವಿರುದ್ಧದ ಆರೋಪಗಳನ್ನು ವಜಾಗೊಳಿಸಲಾಯಿತು ಹಾಗೂ ಅವರನ್ನು ಬಿಡುಗಡೆಗೊಳಿಸಲಾಯಿತು.

74 ವರ್ಷದ ಈಸ್ಟ್‌ಮನ್‌ಗೆ 7 ಮಿಲಿಯ ಆಸ್ಟ್ರೇಲಿಯನ್ ಡಾಲರ್ ಪರಿಹಾರ ನೀಡುವಂತೆ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ) ಸುಪ್ರೀಂ ಕೋರ್ಟ್ ತನ್ನ ಅಧೀನದ ಸರಕಾರಕ್ಕೆ ಆದೇಶ ನೀಡಿದೆ.

ಜೈಲಿನಲ್ಲಿರುವಾಗಲೇ ತಾಯಿ, ಸೋದರಿಯರ ನಿಧನ

18 ಮಿಲಿಯ ಆಸ್ಟ್ರೇಲಿಯ ಡಾಲರ್ (ಸುಮಾರು 86.5 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಈಸ್ಟ್‌ಮನ್ ನ್ಯಾಯಾಲಯವನ್ನು ಕೋರಿದ್ದರು.

‘‘ಈ ಶಿಕ್ಷೆಯಿಂದಾಗಿ ಕುಟುಂಬವನ್ನು ಹೊಂದುವ ಅವಕಾಶ ನನಗೆ ಸಿಗಲಿಲ್ಲ ಹಾಗೂ ನನ್ನ ವೃತ್ತಿ ಜೀವನವನ್ನು ಮುಂದುವರಿಸಲು ಆಗಲಿಲ್ಲ. ಅದೂ ಅಲ್ಲದೆ, ನಾನು ಜೈಲಿನಲ್ಲಿರುವಾಗ ನನ್ನ ತಾಯಿ ಮತ್ತು ಸಹೋದರಿಯರು ನಿಧನರಾದರು’’ ಎಂದು ಅವರು ನ್ಯಾಯಾಲಯದ ಮುಂದೆ ನಿವೇದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News