ಬಂಧಿತ ಎಲ್‌ಇಟಿ ಉಗ್ರರು, ಮುಖ್ಯಸ್ಥ ಹಾಫಿಝ್ ನನ್ನು ಪಾಕ್ ಶಿಕ್ಷಿಸಬೇಕು

Update: 2019-10-14 17:34 GMT

ವಾಶಿಂಗ್ಟನ್, ಅ. 14: ತನ್ನ ನೆಲದಲ್ಲಿ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುವುದನ್ನು ಪಾಕಿಸ್ತಾನ ತಡೆಯಬೇಕು ಹಾಗೂ ಲಷ್ಕರೆ ತಯ್ಯಬ (ಎಲ್‌ಇಟಿ)ದ ಸ್ಥಾಪಕ ಹಾಫಿಝ್ ಸಯೀದ್ ಸೇರಿದಂತೆ ಆ ಭಯೋತ್ಪಾದಕ ಗುಂಪಿನ ಉಗ್ರರನ್ನು ಶಿಕ್ಷಿಸಬೇಕು ಎಂದು ಅಮೆರಿಕ ಹೇಳಿದೆ.

ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಮಾಡುವವರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ವಿಷಯದಲ್ಲಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಮಹತ್ವದ ನಿರ್ಧಾರಕ್ಕೆ ಬರುವ ಮುನ್ನ ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಶ್ಯ ಬ್ಯೂರೋದ ಮುಖ್ಯಸ್ಥೆ ಆ್ಯಲಿಸ್ ವೆಲ್ಸ್ ಈ ಹೇಳಿಕೆ ನೀಡಿದ್ದಾರೆ.

ಅದೇ ವೇಳೆ, ಪಾಕಿಸ್ತಾನದಲ್ಲಿ ಲಷ್ಕರೆ ತಯ್ಯಬ/ಜಮಾಅತುದಅವಾಕ್ಕೆ ಸೇರಿದ ನಾಲ್ವರು ಉನ್ನತ ನಾಯಕರನ್ನು ಬಂಧಿಸಿರುವುದನ್ನು ಅವರು ಸ್ವಾಗತಿಸಿದ್ದಾರೆ. ಪಾಕಿಸ್ತಾನದ ಕಾನೂನು ಅನುಷ್ಠಾನ ಸಂಸ್ಥೆಗಳು ಗುರುವಾರ ನಿಷೇಧಿತ ಲಷ್ಕರೆ ತಯ್ಯಬ/ಜಮಾಅತುದಅವಾಕ್ಕೆ ಸೇರಿದ ನಾಲ್ವರು ಉನ್ನತ ನಾಯಕರನ್ನು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಬಂಧಿಸಿವೆ ಎಂದು ಹೇಳಲಾಗಿದೆ.

‘‘ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವಂತೆ, ಆ ದೇಶವು ತನ್ನದೇ ಭವಿಷ್ಯಕ್ಕಾಗಿ ತನ್ನ ನೆಲದಲ್ಲಿ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುವುದನ್ನು ತಡೆಯಬೇಕು’’ ಎಂಬುದಾಗಿ ವೆಲ್ಸ್ ಟ್ವೀಟ್ ಮಾಡಿದ್ದಾರೆ.

‘‘ಪಾಕಿಸ್ತಾನವು ನಾಲ್ವರು ಲಷ್ಕರೆ ತಯ್ಯಬ ನಾಯಕರನ್ನು ಬಂಧಿಸಿದೆ ಎಂಬ ಸುದ್ದಿಯನ್ನು ನಾವು ಸ್ವಾಗತಿಸುತ್ತೇವೆ. ಲಷ್ಕರೆ ತಯ್ಯಬ ಮುಖ್ಯಸ್ಥ ಹಫೀಝ್ ಸಯೀದ್ ಮತ್ತು ಬಂಧಿತ ಉಗ್ರರಿಗೆ ಶಿಕ್ಷೆಯಾಗುವುದನ್ನು ಆ ಭಯೋತ್ಪಾದಕ ಸಂಘಟನೆಯ ಬಲಿಪಶುಗಳು ನೋಡಬಯಸುತ್ತಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News