ಬಡತನ ನಿವಾರಿಸುವ ಪ್ರಯೋಗಗಳ ಹಾದಿಯಲ್ಲಿ ಅಭಿಜಿತ್ ಬ್ಯಾನರ್ಜಿ ಪಯಣ

Update: 2019-10-14 17:59 GMT

ವಾಶಿಂಗ್ಟನ್, ಅ. 14: ಭಾರತೀಯ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ 2019ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಲಭಿಸುವುದರೊಂದಿಗೆ ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಅವರು ಪ್ರಶಸ್ತಿಯನ್ನು ಮೈಕಲ್ ಕ್ರೆಮರ್ ಮತ್ತು ಎಸ್ತರ್ ಡಫ್ಲೊ ಜೊತೆ ಹಂಚಿಕೊಂಡಿದ್ದಾರೆ.

‘‘ಜಾಗತಿಕ ಬಡತನವನ್ನು ನಿವಾರಿಸುವಲ್ಲಿ ಅವರು ಮಾಡಿರುವ ಪ್ರಯೋಗಕ್ಕಾಗಿ’’ ಪ್ರಶಸ್ತಿ ನೀಡಲಾಗಿದೆ.

1961ರಲ್ಲಿ ಮುಂಬೈಯಲ್ಲಿ ಜನಿಸಿರುವ ಅಭಿಜಿತ್, ಪ್ರಸಕ್ತ ಅಮೆರಿಕದ ಮ್ಯಾಸಚೂಸಿಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಫೋರ್ಡ್ ಫೌಂಡೇಶನ್ ಇಂಟರ್‌ನ್ಯಾಶನಲ್ ಪ್ರೊಫೆಸರ್ ಆಫ್ ಎಕನಾಮಿಕ್ಸ್ ಆಗಿದ್ದಾರೆ. ಅವರು ಸಹ ಪ್ರಶಸ್ತಿ ವಿಜೇತೆ ಎಸ್ತರ್ ಡಫ್ಲೊ ಮತ್ತು ಖ್ಯಾತ ಶಿಕ್ಷಣ ತಜ್ಞ ಸೆಂದಿಲ್ ಮುಳ್ಳೈನಾಥನ್ ಜೊತೆಗೆ 2003ರಲ್ಲಿ ‘ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್’ ಸ್ಥಾಪಿಸಿದರು ಹಾಗೂ ಈಗಲೂ ಅದರ ನಿರ್ದೇಶಕರ ಪೈಕಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು 1980ರ ದಶಕದ ಆದಿ ಭಾಗದಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಮತ್ತು ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದರು. ಬಳಿಕ ಅವರು 1988ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದರು.

ಅವರು ಬ್ಯೂರೋ ಫಾರ್ ರಿಸರ್ಚ್ ಆ್ಯಂಡ್ ಎಕನಾಮಿಕ್ ಎನಾಲಿಸಿಸ್ ಆಫ್ ಡೆವೆಲಪ್‌ಮೆಂಟ್‌ನ ಮುಖ್ಯಸ್ಥರಾಗಿದ್ದರು ಹಾಗೂ ಇನ್ಫೋಸಿಸ್ ಪ್ರಶಸ್ತಿ ವಿಜೇತರಾಗಿದ್ದಾರೆ.

ಅವರು ನಾಲ್ಕು ಪುಸ್ತಕಗಳು ಮತ್ತು ಹಲವಾರು ಶ್ರೇಷ್ಠ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಅವರು ಡಫ್ಲೊ ಜೊತೆ ಸೇರಿದ ಬರೆದ ‘ಪುವರ್ ಎಕನಾಮಿಕ್ಸ್’ ಪುಸ್ತಕಕ್ಕೆ 2011ರಲ್ಲಿ ‘ಗೋಲ್ಡ್‌ಮನ್ ಸ್ಯಾಕ್ಸ್ ಬಿಸ್ನೆಸ್ ಬುಕ್ ಆಫ ದ ಇಯರ್’ ಪ್ರಶಸ್ತಿ ಲಭಿಸಿದೆ. ಈ ಪುಸ್ತಕವು 17 ಜಾಗತಿಕ ಭಾಷೆಗಳಿಗೆ ಅನುವಾದಗೊಂಡಿದೆ.

ಬ್ಯಾನರ್ಜಿ 2015ರಲ್ಲಿ ಎಸ್ತರ್ ಡಫ್ಲೊರನ್ನು ಮದುವೆಯಾದರು. ಅವರು ಕೂಡಾ ಖ್ಯಾತ ಅರ್ಥಶಾಸ್ತ್ರಜ್ಞೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News