34 ನೆಕ್ಕಿಲಾಡಿಯಲ್ಲಿ ಮನೆ ತೆರಿಗೆ ವಿಧಿಸುವಲ್ಲಿ ಲೋಪ: ಆರೋಪ

Update: 2019-10-15 12:24 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದಲ್ಲಿ ಮನೆತೆರಿಗೆ ವಿಧಿಸುವಲ್ಲಿ ಹಲವು ಲೋಪಗಳಾಗಿದ್ದು, ದೊಡ್ಡ ಮನೆಯವರಿಗೆ ಸಣ್ಣ ಮೊತ್ತದ ತೆರಿಗೆ, ಸಣ್ಣ ಮನೆಯವರಿಗೆ ದೊಡ್ಡ ಮಟ್ಟದ ತೆರಿಗೆಯನ್ನು ವಿಧಿಸಲಾಗಿದೆ ಎಂಬ ಗಂಭೀರ ಆರೋಪ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿ ಮನೆಯನ್ನು ಅಳತೆ ಮಾಡಿ ಸರಿಯಾದ ಮಾನದಂಡದಲ್ಲಿ ಮನೆ ತೆರಿಗೆ ವಿಧಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಸತ್ಯವತಿ ಪೂಂಜಾ, ಗ್ರಾಮದಲ್ಲಿ ಮನೆ ತೆರಿಗೆ ವಿಧಿಸುವಲ್ಲಿ ಲೋಪವಾಗಿದೆ. ಇಲ್ಲಿ ವಿಧಿಸಿರುವ ಮನೆ ತೆರಿಗೆಯನ್ನು ಪರಿಶೀಲಿಸಿದಾಗ ಲಂಚ ಕೊಟ್ಟವರಿಗೆ ಕಡಿಮೆ ಮನೆ ತೆರಿಗೆ, ಲಂಚ ಕೊಡದವರಿಗೆ ಜಾಸ್ತಿ ಮನೆ ತೆರಿಗೆ ವಿಧಿಸಿದಂತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಸ್ಪಷ್ಟನೆ ನೀಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್,  ಈ ಹಿಂದೆ 9/11 ಆಗದೆ ಮನೆ ತೆರಿಗೆ ವಿಧಿಸಲಾದ ಮನೆಗಳಲ್ಲಿ ಇಂತಹ ಲೋಪವಾಗಿರುವ ಸಾಧ್ಯತೆ ಇದೆ. ಈಗ ಹೊಸ ಮನೆಗಳಿಗೆ 9/11ನ ಆಧಾರದಲ್ಲಿ ಮನೆ ನಂಬ್ರ ನೀಡಿ ಮನೆ ತೆರಿಗೆ ವಿಧಿಸಲಾಗುತ್ತದೆ. ಅಲ್ಲಿ ನಿಯಮ ಪ್ರಕಾರವೇ ಮನೆ ತೆರಿಗೆ ವಿಧಿಸಲಾಗಿದೆ ಎಂದರು. 

ಉದಾಹರಣೆ ನೀಡಿದ ಸದಸ್ಯೆ: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಸತ್ಯವತಿ ಪೂಂಜಾರವರು, 9/11 ನ ಆಧಾರದಲ್ಲಿ ಮನೆ ತೆರಿಗೆ ವಿಧಿಸುವಾಗ ತಾರತಮ್ಯ ಮಾಡಲಾಗಿದೆ. ನನ್ನ ಮನೆಗೆ ಮತ್ತು ಪಕ್ಕದ ಸುಜಾತ ರೈಯವರ ಮನೆ ಹೆಚ್ಚು ಕಡಿಮೆ ಒಂದೇ ರೀತಿಯದ್ದು. ಆದರೆ ನನಗೆ ಜಾಸ್ತಿ ಮನೆ ತೆರಿಗೆ. ಅವರಿಗೆ ಕಡಿಮೆ ಮನೆ ತೆರಿಗೆ ವಿಧಿಸಲಾಗಿದೆ. ನಮ್ಮ ವಾರ್ಡ್‍ನ ಉದಯಕುಮಾರ್ ಅವರದ್ದು ದೊಡ್ಡ ಮನೆಯಾಗಿದ್ದರೂ, ಅದಕ್ಕೆ ಮನೆ ತೆರಿಗೆಯಾಗಿ ಅತೀ ಸಣ್ಣ ಮೊತ್ತವನ್ನು ಹಾಕಲಾಗಿದೆ ಎಂದರು.

ಸದಸ್ಯ ಪ್ರಶಾಂತ್ ಮಾತನಾಡಿ, ಮೊದಲಿಗೆ ನೀವು ಆರೋಪಿಸುವ ಮನೆಗಳನ್ನು ಮಾತ್ರ ಅಳತೆ ಮಾಡಿ ಪರಿಶೀಲನೆ ಮಾಡೋಣ ಎಂದರು. ಇದಕ್ಕೆ ಸದಸ್ಯೆ ಅನಿ ಮಿನೇಜಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿರ್ದಿಷ್ಟ ಕೆಲವು ಮನೆಗಳನ್ನು ಮಾತ್ರ ಪರಿಶೀಲನೆ ಮಾಡೋದು ಬೇಡ. ಮಾಡುವುದಿದ್ದಲ್ಲಿ ಗ್ರಾಮದ ಪ್ರತಿ ಮನೆಗಳನ್ನು ಅಳತೆ ಮಾಡಿ ನಿಯಮಾನುಸಾರವಾಗಿ ಮನೆ ತೆರಿಗೆ ವಿಧಿಸಬೇಕು ಎಂದರು.

ಈ ಬಗ್ಗೆ ಚರ್ಚೆ ನಡೆದು ಸರ್ವ ಸದಸ್ಯರ ಒಮ್ಮತದ ಮೇರೆಗೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತ್ತಲ್ಲದೆ, ಇದಕ್ಕೆ ವ್ಯಕ್ತಿಯೋರ್ವನನ್ನು ನೇಮಿಸಿ ಗ್ರಾಮದ ಎಲ್ಲಾ ಮನೆಗಳನ್ನು ಮತ್ತೆ ಅಳತೆ ಮಾಡಿ ಮನೆ ತೆರಿಗೆ ವಿಧಿಸಲು ತೀರ್ಮಾನಿಸಲಾಯಿತು.

ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ್ದು: ಅಧ್ಯಕ್ಷೆ ರತಿ ಎಸ್. ನಾಯ್ಕ್ ವಿಷಯ ಪ್ರಸ್ತಾಪಿಸಿ, ನನ್ನ ಟೇಬಲ್ ಮೇಲಿದ್ದ ಸಾರ್ವಜನಿಕರ ಅರ್ಜಿಯನ್ನು ತನ್ನ ಒಪ್ಪಿಗೆ ಕೇಳದೇ ಸದಸ್ಯೆ ತೆಗೆದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅನಿ ಮಿನೇಜಸ್, ಗ್ರಾಮಸ್ಥೆ ರೇಖಾ ಮಲ್ಲೇಶ್ ಅವರು ಗ್ರಾ.ಪಂ.ಗೆ ಬಂದ ನನ್ನಲ್ಲಿ ''ನನ್ನ ಹೊಸ ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ನನಗೆ ಎನ್‍ಒಸಿಯ ಅಗತ್ಯವಿದ್ದು, ಅದು ಮಾಡಿಕೊಡುತ್ತೇನೆಂದು ಗ್ರಾ.ಪಂ. ಅಧ್ಯಕ್ಷರು ನನ್ನಿಂದ 9/11 ಸಹಿತ ಒರಿಜಿನಲ್ ದಾಖಲೆಗಳನ್ನು ಪಡೆದುಕೊಂಡಿದ್ದರು. ಆದರೆ ಎಂಟು ದಿನ ಕಳೆದರೂ ಇನ್ನೂ ಅದನ್ನು ಪಂಚಾಯತ್‍ಗೂ ಕೊಟ್ಟಿಲ್ಲ. ಅವರ ಟೇಬಲ್ ಮೇಲೆಯೇ ಅಜಾಗರೂಕತೆಯಿಂದ ಬಿದ್ದುಕೊಂಡಿದೆ. ನನಗೆ ವಿದ್ಯುತ್ ಸಂಪರ್ಕದ ತುರ್ತು ಅಗತ್ಯವಿದ್ದು, ಅಧ್ಯಕ್ಷರ ಈ ನಡೆಯಿಂದ ನನಗೆ ತೊಂದರೆಯಾಗಿದೆ ಎಂದು ದೂರಿದರು.

ನಾನು ನೋಡುವಾಗ ಅದು ಟೇಬಲ್ ಮೇಲೆಯೇ ಅಜಾಗರೂಕತೆಯಿಂದ ಬಿದ್ದಿತ್ತು.  ಅದನ್ನು ನಾನು ತೆಗೆದು ಅದರ ಜೆರಾಕ್ಸ್ ಪ್ರತಿಗಳನ್ನು ತೆಗೆದು ಗ್ರಾ.ಪಂ.ಗೆ ನೀಡಿದೆ. ಎರಡು ದಿನದಲ್ಲಿ ಅವರ ಕೆಲಸವೂ ಆಗಿದೆ. ನಾನು ಇದು ಮಾಡಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ. ಆ ಬಳಿಕ ಅಧ್ಯಕ್ಷರೇ ನನಗೆ ದೂರವಾಣಿ ಕರೆ ಮಾಡಿ, ನಾನು ಆಕೆಯನ್ನು ಸ್ವಲ್ಪ ದಿನ ಸತಾಯಿಸುವ ಅಂತ ಬೇಕಂತಲೇ ಪೆಂಡಿಂಗ್ ಇಟ್ಟಿದ್ದು ಎಂದು ಹೇಳಿದರು. ನನ್ನ ದೃಷ್ಟಿಯಲ್ಲಿ ಇದು ತಪ್ಪು ನಿರ್ಧಾರ. ಸಾರ್ವಜನಿಕರಿಂದ ಒರಿಜಿನಲ್ ದಾಖಲೆ ಪಡೆದು, ಈ ರೀತಿ ಪೆಂಡಿಂಗ್ ಇಡುವುದಾದರೂ ಯಾಕೆ? ನಾಳೆ ಒರಿಜಿನಲ್ ದಾಖಲೆಯೇನಾದರೂ ನಾಪತ್ತೆಯಾದಲ್ಲಿ ಬಳಿಕ ಸಂಕಷ್ಟಕ್ಕೆ ಸಿಲುಕುವುದು ಸಾರ್ವಜನಿಕರು. ಕೆಲಸ ಮಾಡಿಕೊಡಲು ಸಾಧ್ಯವಿಲ್ಲದವರು ಅದನ್ನು ತೆಗೆದುಕೊಳ್ಳುವುದಾದರೂ ಯಾಕೆ ? ಗ್ರಾ.ಪಂ.ಗೆ ಅಗತ್ಯ ಕೆಲಸಗಳಿಗಾಗಿ ಬರುವ ಸಾರ್ವಜನಿಕರನ್ನು ಸತಾಯಿಸುವ ಕೆಲಸ ಬೇಡ. ಇದರಿಂದ ಸಾರ್ವಜನಿಕರು ಗ್ರಾ.ಪಂ.ನ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ಅಸ್ಕರ್ ಅಲಿ ಮಾತನಾಡಿ, ಇಲ್ಲಿ ಅನಿ ಮಿನೇಜಸ್ ನಿಮ್ಮಲ್ಲಿ ಒಪ್ಪಿಗೆ ಕೇಳದೇ ನಿಮ್ಮ ಟೇಬಲ್‍ನಲ್ಲಿದ್ದ ದಾಖಲೆ ಪಡೆದಿದ್ದರಾದರೂ, ಅವರು ಮಾಡಿರುವುದು ಉತ್ತಮ ಕೆಲಸ. ಗ್ರಾ.ಪಂ. ಸದಸ್ಯೆಯಾಗಿ ಅವರಿಗೆ ಸಾರ್ವಜನಿಕರ ಕೆಲಸಗಳ ಮೇಲಿನ ಕಾಳಜಿಯಿಂದ ಈ ರೀತಿ ಮಾಡಿದ್ದಾರೆ. ಆದರೆ ಒರಿಜಿನಲ್ ದಾಖಲೆಗಳನ್ನು ಪಡೆದು ಈ ರೀತಿ ಅಜಾಗರೂಕತೆಯಿಂದ ಇಟ್ಟಿದ್ದು ಅದು ಅಧ್ಯಕ್ಷರಾಗಿ ನಿಮ್ಮ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದರು. 

ಹೆರಿಗೆ ಭತ್ತೆ ಕಸಿಯಲು ಸಮ್ಮತವಿಲ್ಲ: ಗ್ರಾ.ಪಂ. ಸಿಬ್ಬಂದಿಯೋರ್ವರು ಹೆರಿಗೆ ರಜೆಗೆಂದು ತೆರಳಿದ್ದು, ಅವರ ಬದಲಿಗೆ ಗ್ರಾ.ಪಂ. ಸದಸ್ಯರ ಗಮನಕ್ಕೆ ತಾರದೇ ಬದಲಿ ಸಿಬ್ಬಂದಿಯೋರ್ವರನ್ನು ತಾತ್ಕಾಲಿಕವಾಗಿ ಇಲ್ಲಿ ಕೆಲಸಕ್ಕೆ ನೇಮಿಸಲಾಗಿದೆ. ಅವರು ಬೇರೆ ಗ್ರಾಮದವರು. ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೇ ಅವರ ನೇಮಕ ಹೇಗೆ ಮಾಡಿದಿರಿ ಎಂದು ಸದಸ್ಯರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಪಿಡಿಒ ಮಾತನಾಡಿ, ಹೆರಿಗೆ ರಜೆಯಲ್ಲಿ ತೆರಳಿದ ಸಿಬ್ಬಂದಿಯೇ ಇವರನ್ನು ಅವರ ಕೆಲಸಕ್ಕೆ ನೇಮಿಸಿದ್ದು, ಅವರೇ ಅವರಿಗೆ ಸಂಬಳವನ್ನು ನೀಡಲಿದ್ದಾರೆ ಎಂದರು. ಇದಕ್ಕೆ ಅನಿ ಮಿನೇಜಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹೆರಿಗೆ ರಜೆ ಅನ್ನುವುದು ಸರಕಾರ ನೀಡುವ ಸೌಲಭ್ಯ. ಇಲ್ಲಿ ಅವರಿಗೆ ಸಂಬಳ ಸಹಿತ ರಜೆ ಇದೆ. ಅದನ್ನು ಇನ್ನೊಬ್ಬರಿಗೆ ನೀಡಿ ಎನ್ನುವುದು ಕಾನೂನು ವಿರೋಧ. ಇದಕ್ಕೆ ನಮ್ಮದು ವಿರೋಧವಿದೆ ಎಂದರು.

ಈ ಬಗ್ಗೆ ಚರ್ಚೆಯಾಗಿ, ಇನ್ನೊಬ್ಬ ಸಿಬ್ಬಂದಿಯೂ ಇನ್ನು ಕೆಲವು ದಿನಗಳಲ್ಲಿ ಹೆರಿಗೆ ರಜೆಯಲ್ಲಿ ತೆರಳಲಿದ್ದಾರೆ. ಕುಡಿಯುವ ನೀರಿನ ಬಿಲ್ ವಸೂಲಾತಿಯ ಲೆಕ್ಕಚಾರ ಸರಿಯಿಲ್ಲದ ಕಾರಣ ಅದನ್ನು ನೋಡಲು ಯುವಕನೋರ್ವನನ್ನು ನೇಮಿಸಲಾಗಿದೆ. ಆತನಿಗೆ ಒಂದು ತಿಂಗಳ ಸಂಬಳ ನೀಡಲು ಮಾತ್ರ ನಾವು ಒಪ್ಪಿದ್ದೇವೆ. ಇನ್ನು ಮುಂದಕ್ಕೆ ಆತ ಮಾಡುವ ಕೆಲಸಕ್ಕೆ ಹೆರಿಗೆ ರಜೆಯಲ್ಲಿ ಹೋದ ಸಿಬ್ಬಂದಿಯ ಸಂಬಳವನ್ನು ಪಡೆದು ಈತನಿಗೆ ನೀಡುವುದಕ್ಕೆ ನಮ್ಮದು ಸಮ್ಮತಿಯಿಲ್ಲ. ಆದ್ದರಿಂದ ಈಗ ತಾತ್ಕಾಲಿಕ ನೇಮಕಾತಿ ಪಡೆದಿರುವ ಇಬ್ಬರಿಗೂ ಸಂಬಳ ನೀಡುವ ವಿಷಯದಲ್ಲಿ ಗ್ರಾ.ಪಂ.ನ ಆಡಳಿತ ಜವಾಬ್ದಾರವಲ್ಲ. ಪಂಚಾಯತ್‍ನಿಂದ ಸಂಬಳ ನೀಡುವುದಕ್ಕೂ ನಮ್ಮ ಸಮ್ಮತಿಯಿಲ್ಲ ಎಂದು ನಿರ್ಣಯ ಅಂಗೀಕರಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿಕಾಪ್‍ನಲ್ಲಿ ತಂದು ಕಸ ಸುರಿಯುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದಿದ್ದು, ಈತನ ಮೇಲೆ ಪೊಲೀಸ್ ದೂರು ನೀಡಬೇಕು ಎಂದು ಸದಸ್ಯ ಪ್ರಶಾಂತ್ ಆಗ್ರಹಿಸಿದರು. ಇದಕ್ಕೆ ಸದಸ್ಯರು ಸಮ್ಮತ ವ್ಯಕ್ತಪಡಿಸಿದರು. ತಾಳೆಹಿತ್ಲು ಟ್ಯಾಂಕ್‍ನಲ್ಲಿ ನೀರಿನ ದುರುಪಯೋಗ ತಡೆಗಟ್ಟುವ ಹಾಗೂ ಸಂಪರ್ಕದಲ್ಲಿ ತಾರತಮ್ಯವನ್ನು ಸರಿಪಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಪಿಡಿಒ ಇಲ್ಲದಿದ್ದಾಗ ಸಾರ್ವಜನಿಕರ ಅರ್ಜಿಗಳನ್ನು ಪಡೆಯಲಾಗುತ್ತಿಲ್ಲ ಎಂಬ ಆರೋಪವಿದ್ದು, ಪಿಡಿಒ ಇಲ್ಲದಿದ್ದಾಗ ಅರ್ಜಿಗಳನ್ನು ಪಡೆದು, ಅದಕ್ಕೆ ಎಂಡೋಸ್‍ಮೆಂಟ್ ನೀಡುವ ಕೆಲಸವನ್ನು ಬದಲಿ ಸಿಬ್ಬಂದಿಗೆ ವಹಿಸಿಕೊಡಬೇಕು.  ಪ್ರತಿ ಅರ್ಜಿಗಳನ್ನು ಪಡೆದ ದಿನಾಂಕ ಹಾಗೂ ಅದನ್ನು ವಿಲೇ ಮಾಡಲಾದ ದಿನಾಂಕವನ್ನು ರಿಜಿಸ್ಟ್ರಾರ್‍ನಲ್ಲಿ ದಾಖಲಿಸಬೇಕು. ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಬೇಕು. ಬೆಳಗ್ಗೆ ಸರಿಯಾದ ಸಮಯಕ್ಕೆ ಸಿಬ್ಬಂದಿ ಕಚೇರಿಗೆ ಬರಬೇಕು ಎಂದು ಅನಿ ಮಿನೇಜಸ್ ಆಗ್ರಹಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಪ್ರಶಾಂತ್, ಶೇಖಬ್ಬ ಎನ್., ಮೈಕಲ್ ವೇಗಸ್, ಬಾಬು ನಾಯ್ಕ, ಅನಿ ಮಿನೇಜಸ್, ಕೃಷ್ಣವೇಣಿ, ಯಮುನಾ,  ಸತ್ಯವತಿ ಪೂಂಜಾ, ಜ್ಯೋತಿ ಉಪಸ್ಥಿತರಿದ್ದು, ಸಲಹೆ- ಸೂಚನೆಗಳನ್ನು ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.

ದಡ ಮುಟ್ಟದ 'ನೀರಿನ ಬಿಲ್ ಬಾಕಿ ಪ್ರಕರಣ'

34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಬಾಕಿಯಿದ್ದು, ಇದರ ಸಮರ್ಪಕ ಲೆಕ್ಕ ಕೊಡುವಂತೆ ಬಿಲ್ ವಸೂಲಿಗ ಸಿಬ್ಬಂದಿಗೆ ಹಲವು ಗಡುವುಗಳನ್ನು ನೀಡಲಾಗಿದೆ. ಕೊನೆಯ ಗಡುವಾದ ಸಾಮಾನ್ಯ ಸಭೆಯ ದಿನ ಸಭೆಯ ಕೊನೆಗೆ ಲೆಕ್ಕವನ್ನು ಒಪ್ಪಿಸಲಾಯಿತು. ಅದನ್ನು ಪರಿಶೀಲಿಸಿದ ಅನಿ ಮಿನೇಜಸ್ ಇದರಲ್ಲಿ ವ್ಯತ್ಯಾಸಗಳಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ನಿರುತ್ತರರಾದ ಪಿಡಿಒ, ಇಂದು ಬೆಳಗ್ಗೆ ಕಚೇರಿಗೆ ಹಾಜರಾಗಿದ್ದ ಬಿಲ್ ವಸೂಲಿಗ ಸಿಬ್ಬಂದಿ ಸಭೆ ಆರಂಭವಾಗುತ್ತಲೇ ಅನಾರೋಗ್ಯ ಎಂದು ಹೇಳಿ ರಜೆ ಮಾಡಿ ತೆರಳಿದ್ದಾರೆ. ಹಾಗಾಗಿ ಇದಕ್ಕೆ ಅವರೇ ಉತ್ತರಿಸಬೇಕು. ನನಗೆ ಗೊತ್ತಿಲ್ಲ ಎಂದರು.

ಈ ಸಂದರ್ಭ ಅನಿ ಮಿನೇಜಸ್ ಹಾಗೂ ಪ್ರಶಾಂತ್ ಅವರು ಇಷ್ಟು ಸಮಯಾವಕಾಶ ನೀಡಿದರೂ ಇನ್ನೂ ಲೆಕ್ಕ ಸರಿಯಾಗಿ ನೀಡಲು ಆಗದಿದ್ದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಚರ್ಚೆಯಾಗುತ್ತಿರುವಾಗ ಸತ್ಯವತಿ ಪೂಂಜಾ ಅವರು, ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ. ಮುಂದಕ್ಕೆ ಎಲ್ಲಾ ಸರಿಯಾಗಿರುವಂತೆ ನೋಡೋಣ ಎಂದರು.

ಸ್ವಲ್ಪ ಸಮಯವಾದಾಗ ಶೇಖಬ್ಬ ಎನ್. ಅವರೂ ಅದೇ ದಾಟಿಯಲ್ಲಿ ಮಾತನಾಡಿದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅನಿ ಮಿನೇಜಸ್ ಹಾಗೂ ಪ್ರಶಾಂತ್, ಇದರಲ್ಲಿ ಅವ್ಯವಹಾರ ನಡೆದಿದ್ದರೆ, ಅದರ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮವಾಗಲೇ ಬೇಕು. ಇದನ್ನು ಇಲ್ಲಿಗೆ ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ. ಇದು ಸಾರ್ವಜನಿಕರ ದುಡ್ಡು. ಅದಕ್ಕೆ ಪ್ರತಿಯೊಂದಕ್ಕೂ ಲೆಕ್ಕ ಇರಬೇಕು. ಸಾರ್ವಜನಿಕರ ಹಣ ದುರುಪಯೋಗವಾಗಲು ನಾವು ಆಸ್ಪದ ಕೊಡುವುದಿಲ್ಲ ಎಂದರು.

ಈ ಚರ್ಚೆಗಳ ಸಂದರ್ಭ ಕೆಲ ಸದಸ್ಯರು ಸಭೆಯಿಂದ ತೆರಳಿದ್ದರೆ, ಇದ್ದ ಕೆಲ ಸದಸ್ಯರು ಮೌನವಾಗಿದ್ದರು. ಇನ್ನಿಬ್ಬರು ಪ್ರಕರಣವನ್ನು ಕೈಬಿಡುವ ಉತ್ಸುಕತೆಯಲ್ಲಿದ್ದುದ್ದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News