'ರೋಗಿಗಳ ಚಿಕಿತ್ಸೆ ಹೆಸರಿನಲ್ಲಿ ಹಣ ಸಂಗ್ರಹಿಸುವ ಮಾಫಿಯಾ'

Update: 2019-10-15 12:35 GMT

ಮಂಗಳೂರು, ಅ.15: ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಚಿಕಿತ್ಸೆಗೆಂದು ಸಾಮಾಜಿಕ ಜಾಲತಾಣದ ಮೂಲಕ ಹಣ ಸಂಗ್ರಹಿಸುವ ಮಾಫಿಯಾಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಜನತೆ ಜಾಗೃತರಾಗಿರಬೇಕು ಎಂದು ಮಂಗಳೂರಿನ ನರ್ಸಿಂಗ್ ಹೋಮ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ರೋಗಿಗಳ ಚಿಕಿತ್ಸೆಗೆಂದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ ರವಾನಿಸಲಾಗುತ್ತದೆ. ಕೆಲವೊಮ್ಮೆ ರೋಗಿಗಳ ಬಳಿ ಬ್ಯಾಂಕ್ ಖಾತೆ ಇಲ್ಲ ಎಂದು ತಮ್ಮ ಖಾತೆಯ ಸಂಖ್ಯೆಯನ್ನು ನೀಡಲಾಗುತ್ತಿದೆ. ಹೀಗೆ ಲಕ್ಷಾಂತರ ರೂ. ಹಣ ಸಂಗ್ರಹಿಸುವ ಘಟನೆಗಳು ನಡೆಯುತ್ತಿದ್ದು, ರೋಗಿಗಳ ಹೆಸರಿನಲ್ಲಿ ವಂಚನೆಯಾಗುತ್ತಿದೆ. ಆದ್ದರಿಂದ ಜನತೆ ಜಾಗೃತರಾಗಿರಬೇಕು ಎಂದರು.

ರೋಗಿಗಳಿಗೆ ಸ್ಪಂದಿಸಬೇಕೆಂದರೆ ನೇರವಾಗಿ ಆಸ್ಪತ್ರೆಯನ್ನು ಸಂಪರ್ಕಿಸಿ ರೋಗಿಗೆ ನೆರವು ನೀಡಬಹುದು. ಆದರೆ ವಾಟ್ಸ್‌ಆ್ಯಪ್ ಮೂಲಕ ಬರುವ ಸಂದೇಶವನ್ನು ನಂಬುವಂತಿಲ್ಲ. ಅಲ್ಲದೆ ವೈದ್ಯರು ಮತ್ತು ಆಸ್ಪತ್ರೆಗಳಿಂದಲೂ ಸುಲಿಗೆ ಮಾಡುವ ಮಾಫಿಯಾಗಳು ಹುಟ್ಟಿಕೊಂಡಿವೆ. ತನಗೂ ಇತ್ತೀಚೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ನಿಮ್ಮ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸುದ್ದಿ ಪಸರಿಸುವುದಾಗಿ ಬೆದರಿಕೆ ಒಡ್ಡಿದ್ದ. ಈ ಕುರಿತಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಡಾ.ಯೂಸುಫ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್, ಅಫ್ತಾಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News