ಸ್ಪಿಟ್ ಮುಂಬೈ ತಂಡಕ್ಕೆ ಮಣಿಪಾಲ ಹ್ಯಾಕಥಾನ್ ಪ್ರಶಸ್ತಿ

Update: 2019-10-15 14:10 GMT

ಮಣಿಪಾಲ, ಅ.15: ಮುಂಬೈಯ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟೀಮ್ ಹ್ಯಾಕಿಂಗ್ ಬ್ಯಾಡ್ ತಂಡ, ಸ್ಥಳೀಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ವಿದ್ಯಾರ್ಥಿ ಸಂಘದ ವತಿ ಯಿಂದ ನಡೆದ ಪ್ರಥಮ 36 ಗಂಟೆಗಳ ಮಣಿಪಾಲ ಹ್ಯಾಕಥಾನ್‌ನಲ್ಲಿ ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಎಂಐಟಿಯ ಕೆಇಎಫ್ ಸಭಾಂಗಣದಲ್ಲಿ ಸತತ 36 ಗಂಟೆಗಳ ಕಾಲ ನಡೆದ ಮಣಿಪಾಲ ಹ್ಯಾಕಥಾನ್ ರವಿವಾರ ಮುಕ್ತಾಯಗೊಂಡಿತು. ಸ್ಪಿಟ್ ತಂಡ ಅಗ್ರಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂ.ನಗದು ಪುರಸ್ಕಾರವನ್ನೂ ಗೆದ್ದುಕೊಂಡಿತು.

ಎಂಐಟಿಯ ವಿದ್ಯಾರ್ಥಿ ಸಂಘ ತಾನು ಸಂಘಟಿಸುವ ವಾರ್ಷಿಕ ತಂತ್ರಜ್ಞಾನ ಮೇಳ ‘ಟೆಕ್‌ತತ್ವ’ದ ಭಾಗವಾಗಿ ಮಣಿಪಾಲ ಹ್ಯಾಕಥಾನ್‌ನ್ನು ಮೊದಲ ಬಾರಿ ಆಯೋಜಿಸಿದ್ದು, ಇದರಲ್ಲಿ ಮುಂಬೈ ವಿವಿಯ ಟೀಮ್ ಕೋಡ್‌ಲಯನ್ ರನ್ನರ್ ಅಪ್ ಸ್ಥಾನದೊಂದಿಗೆ 50,000ರೂ. ನಗದು ಬಹುಮಾನ ಗೆದ್ದುಕೊಂಡಿತು.

ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟೀಮ್ ಕುಬೇರ್ ಟೆಕ್ಕಿ, ಪುಣೆ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಟೆಕ್ನಾಲಜಿಯ ಟೀಮ್ ಡಿಫಾಲ್ಟ್, ಅದೇ ಸಂಸ್ಥೆಯ ಇನ್ನೊಂದು ತಂಡ ಟೀಮ್ ಕೋಡ್ ಓ ಹಾಲಿಕ್ ಹಾಗೂ ಪಿಳ್ಳೈ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಟೀಮ್ ಕೋಲ್ಡ್‌ಬ್ಲಡೆಡ್ ವಿಶೇಷ ಮೆಚ್ಚುಗೆಗೆ ಪಾತ್ರವಾದವು.

ಈ ಬಾರಿಯ ಹ್ಯಾಕಥಾನ್‌ನ ವಿಷಯ ‘ಸಾಮಾಜಿಕ ಆವಿಷ್ಕಾರ’. ಪ್ರತಿ ತಂಡವೂ ತನಗೆ ನೀಡಿದ ಐದು ಸಮಸ್ಯೆಗಳಲ್ಲಿ ಒಂದಕ್ಕೆ ಸೂಕ್ತ ಪರಿಹಾರವನ್ನು ಹುಡುಕಬೇಕಿತ್ತು. ಆರೋಗ್ಯ ವ್ಯವಸ್ಥೆ, ಮಹಿಳೆಯರ ವಿರುದ್ಧದ ಅಪರಾಧ ಕಡಿಮೆ ಮಾಡುವುದು, ಸ್ಮಾರ್ಟ್ ಸಿಟಿ ಯೋಜನೆಯ ಅಭಿವೃದ್ಧಿ, ವೈದ್ಯರು ನೀಡುವ ಚೀಟಿವ್ಯವಸ್ಥೆಯನ್ನು ಸುಲಲಿತಗೊಳಿಸುವುದು ವಿದ್ಯಾರ್ಥಿಗಳಿಗೆ ನೀಡಿದ ವಿಷಯಗಳಾಗಿದ್ದವು.

ಪ್ರಥಮ ಬಹುಮಾನ ಪಡೆದ ಸ್ಪಿಟ್‌ನ ಟೀಮ್ ಹ್ಯಾಕಿಂಗ್‌ಬ್ಯಾಡ್, ಮಹಿಳೆಯರ ರಕ್ಷಣೆಯ ಸುಧಾರಣೆಗೆ ಸಹಾಯಕವಾಗುವ ಆ್ಯಪ್‌ನ್ನು ಅಭಿವೃದ್ಧಿ ಪಡಿಸಿತು. ಮಹಿಳೆಯೊಬ್ಬಳು ಹೊರಗೆ ಹೋದಾಗ, ಅಸುರಕ್ಷಿತ ವಲಯ ಪ್ರವೇಶಿಸಿದಾಗ ಇದು ಆಕೆಯ ನೆರವಿಗೆ ಬರುವಂತೆ ರೂಪಿಸಲಾಗಿದೆ. ರನ್ನರ್ ಅಫ್ ಮುಂಬೈ ವಿವಿ ತಂಡ, ಟ್ರಾಫಿಕ್ ಲೈಟ್‌ನಲ್ಲಿ ಸುಧಾರಿತ ಹಾಗೂ ಸರಳ ವ್ಯವಸ್ಥೆಯನ್ನು ರೂಪಿಸಿತ್ತು.

ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಎಂಇಎಂಜಿಯ ಗ್ರೂಪ್ ಅಧ್ಯಕ್ಷ ರಾಜನ್ ಪಡುಕೋಣೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ, ಸಹ ನಿರ್ದೇಶಕ ಡಾ.ನಾರಾಯಣ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News