ಅ.18: ಬ್ಯಾಂಕ್ ವಿಲೀನ ವಿರುದ್ಧ ಮೊಂಬತ್ತಿ ಮೆರವಣಿಗೆ

Update: 2019-10-15 14:15 GMT

ಮಂಗಳೂರು, ಅ.15: ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನೀಕರಣ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಜನವಿರೋಧಿ ಕ್ರಮಗಳ ವಿರುದ್ಧ ಬ್ಯಾಂಕ್ ನೌಕರರ-ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಅ.18ರಂದು ಸಂಜೆ 6 ಗಂಟೆಗೆ ನಗರದ ಪುರಭವನದಿಂದ ಮೊಂಬತ್ತಿ ಮೆರವಣಿಗೆ ಹೊರಟು ಪಾಂಡೇಶ್ವರದ ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಲಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯ(ಯುಎಫ್‌ಬಿಯು) ಸಂಚಾಲಕ ವಿನ್ಸೆಂಟ್ ಡಿಸೋಜ, ಕೇಂದ್ರ ಸರಕಾರವು ಕಳೆದ ವರ್ಷ ವಿಜಯ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ ನಾಮಾವಶೇಷ ಮಾಡಿತು. ಜಿಲ್ಲೆಯ ಪ್ರತೀಷ್ಠೆಗೆ ಇದು ಮೊದಲ ಗದಾಪ್ರಹಾರ. ಈ ಬಾರಿ ಮತ್ತೆ ಕರಾವಳಿಯ ಸಿಂಡಿಕೇಟ್, ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದು, ಜಿಲ್ಲೆಯ ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನೀಕರಣದಿಂದ ಅನೇಕ ಬ್ಯಾಂಕ್ ಶಾಖೆಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಲ್ಲಿ ದೇಶದ 6,950 ಶಾಖೆಗಳನ್ನು ಮುಚ್ಚಿ ಹಾಕಿದೆ. ಬ್ಯಾಂಕ್ ಆಫ್ ಬರೋಡಾದ ವಿಲೀನ ಪ್ರಕ್ರಿಯೆಯಲ್ಲಿ 800ರಿಂದ 900 ಬ್ಯಾಂಕ್ ಶಾಖೆಗಳ ಮುಚ್ಚುವ ಸಾಧ್ಯತೆ ಇದೆ ಎಂದರು.

ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಮಾತನಾಡಿ, ಬ್ಯಾಂಕ್‌ಗಳ ವಿಲೀನದಿಂದ ದೇಶದ ಆರ್ಥಿಕತೆಗೆ ಪ್ರಬಲ ಪೆಟ್ಟು ಬಿದ್ದಿದೆ. ಕೇಂದ್ರ ಸರಕಾರದ ಕ್ರಮದ ವಿರುದ್ಧ ಪ್ರಬಲ ಜನಾಂದೋಲನ ರೂಪಿಸಬೇಕು. ಕರಾವಳಿ ಜಿಲ್ಲೆಯ ಜನತೆಯ ಬೆವರಿನ ಪಾಲಿನಿಂದ ನಿರ್ಮಾಣಗೊಂಡ ಬ್ಯಾಂಕ್‌ಗಳ ರಕ್ಷಣೆಗಾಗಿ ತುಳುನಾಡಿನ ಜನತೆ ಧರ್ಮ, ಜಾತಿ-ಭೇದ ಮರೆತು ಒಂದಾಗಬೇಕು ಎಂದು ಹೇಳಿದರು.

ಈ ಹೋರಾಟಕ್ಕೆ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಸಿಐಟಿಯು, ಇಂಟಕ್, ಎಚ್‌ಎಂಎಸ್ ಬ್ಯಾಂಕ್ ನೌಕರರ ಸಂಘಗಳು, ಇತರ ಸಂಘಟನೆಗಳಾದ ಎಐಬಿಇಎ, ಎಐಬಿಒಎ, ಎಐಬಿಒಎ, ಎನ್‌ಒಬಿಡಬ್ಲು, ಎನ್‌ಒಬಿಒ, ಬಿಇಎಫ್‌ಐ, ನಿವೃತ್ತ ಬ್ಯಾಂಕ್ ನೌಕರರ ಸಂಘಗಳು, ವಿದ್ಯಾರ್ಥಿ ಯುವಜನ ಸಂಘಟನೆಗಳಾದ ಎಐಎಸ್‌ಎಫ್, ಎಸ್‌ಎಫ್‌ಐ, ಡಿವೈಎಫ್‌ಐ, ಎಐವೈಎಫ್, ದಲಿತ ಸಂಘರ್ಷ ಸಮಿತಿ ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಸಿಟಿಯು ಜಿಲ್ಲಾ ಮುಖಂಡ ಎಚ್.ವಿ.ರಾವ್, ಸಿಬಿಇಯು ಉಪಾಧ್ಯಕ್ಷ ಆರ್.ಕೆ.ಬಳ್ಳಾಲ್, ಸಿಬಿಒಒ ಮುಖಂಡ ಸುಧೀಂದ್ರ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಎಐಬಿಒಎ ರಾಜ್ಯ ಮುಖಂಡ ರಾಘವ ಕೆ., ರಾಜ್ಯ ದಲಿತ ಮುಖಂಡ ಎಂ.ದೇವದಾಸ್, ನ್ಯಾಯವಾದಿ ದಿನೇಶ್ ಹೆಗಡೆ ಉಳಿಪ್ಪಾಡಿ, ಕರ್ನಾಟಕ ಬ್ಯಾಂಕ್‌ನ ಫಣೀಂದ್ರ, ಬಿ.ಎಸ್.ಅಕ್ಕಿತಾಯ, ಪ್ರಸಾದ್, ವಿವಿಧ ಸಂಘಟನೆಗಳ ವಿ.ಕುಕ್ಯಾನ್, ಸುಧಾಕರ, ಸುನೀಲ್ ರಾಜ್, ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News