ಬಂಟ್ವಾಳ: ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು, ಸಂಕಷ್ಟಗಳ ವಿರುದ್ಧ ಸಿಪಿಐ ಪ್ರತಿಭಟನೆ

Update: 2019-10-15 14:41 GMT

ಬಂಟ್ವಾಳ, ಅ. 15: ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟಗಳ ವಿರುದ್ಧ ಸಿಪಿಐ ಹಾಗೂ ಸಿಪಿಐಎಂ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಎಡಪಕ್ಷಗಳ ಅಖಿಲ ಭಾರತ ಪ್ರತಿಭಟನೆ ಮಂಗಳವಾರ ಬಿ.ಸಿ.ರೋಡ್ ಜಂಕ್ಷನ್‍ನಲ್ಲಿ ನಡೆಯಿತು.

ಡಿವೈಎಫ್‍ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಭಟನಾನಿರತನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ದೊಡ್ಡ ಪ್ರಮಾಣದ ಕೈಗಾರಿಕೆಯಿಂದ ಹಿಡಿದು ಸಣ್ಣಗುಡಿ ಕೈಗಾರಿಕೆಗಳು ಕೂಡಾ ಮುಚ್ಚಿ ಹೋಗುತ್ತಿವೆ. ವಿವಿಧ ಕ್ಷೇತ್ರದಲ್ಲಿ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟದ ಬದುಕು ಎದುರಿಸುತ್ತಿದ್ದು, ಇನ್ನು ಕೆಲವರು ಬೀದಿ ಬಂದಿದ್ದಾರೆ. ದಿನೇ ದಿನೇ ವ್ಯಾಪಾರ ವಹಿವಾಟಿಲ್ಲದೆ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದು, ಈ ದೇಶದಲ್ಲಿ ಬದುಕುವುದೇ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕುದುರೆಮುಖ ಮತ್ತು ಎಂಆರ್‍ಪಿಎಲ್ ಕಾರ್ಖಾನೆಗಳು ವಿಸ್ತರಣೆಯಾಗುತ್ತಿವೆ. ಆದರೆ, ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಆಗಲಿ, ಉಳಿದ ಶಾಸಕರಾಗಲಿ ಇಲ್ಲಿನ ಜನತೆಗೆ ಉದ್ಯೋಗ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೇ ಉತ್ತರ ಭಾರತದ ಜನತೆಗೆ ಕೊಡುತ್ತಿರುವುದರಿಂದ ಮತ್ತಷ್ಟು ನಿರುದ್ಯೋಗ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದರು.

ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಪ್ರಸ್ತಾವಿಸಿ ಮಾತನಾಡಿ, ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಫಾರ್ವರ್ಡ್ ಬ್ಲಾಕ್ ಹಾಗೂ ಆರ್‍ಎಸ್‍ಪಿ ಎಡಪಕ್ಷಗಳ ವತಿಯಿಂದ ದೇಶಾದ್ಯಂತ ಪ್ರತಿಭಟನಾ ಸಭೆಗಳು ನಡೆಯುತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಪ್ರಮುಖರಾದ ಉದಯ ಕುಮಾರ್, ಸಂಜೀವ ಬಂಗೇರ, ವಾಸುಗಟ್ಟಿ, ಬಾಬು ಭಂಡಾರಿ, ಭಾರತಿ ಶಂಭೂರು, ಸರಸ್ವತಿ ಕಡೇಶಿವಾಲಯ, ಪಿ.ವಿಠಲ ಬಂಗೇರ, ಸುಧಾಕರ ಹಾಜರಿದ್ದರು.

ಸಿಪಿಐ(ಎಂ) ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ ವಂದಿಸಿದರು. ಮುಖಂಡ ಸುರೇಶ್ ಕುಮಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News