ಬೈರಂಪಳ್ಳಿ: ದಿಢೀರ್ ಮಳೆಗೆ ಕೊಚ್ಚಿ ಹೋದ ರಸ್ತೆ; ಸಂಪರ್ಕ ಕಡಿತ

Update: 2019-10-15 15:31 GMT

ಉಡುಪಿ, ಅ.15: ಇಂದು ಅಪರಾಹ್ನದ ವೇಳೆಗೆ ದಿಢೀರ್ ಸುರಿದ ಭಾರೀ ಮಳೆಗೆ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಪದಕಟ್ಟೆ ಕಂಚಿಗುಂಡಿ ಎಂಬಲ್ಲಿ ಹರಿಖಂಡಿಗೆ-ಪೆರ್ಡೂರು ಸಂಪರ್ಕಿಸುವ ಲೋಕೋಪಯೋಗಿ ರಸ್ತೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.

ದಿಢೀರ್ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಬದಿಯ ಗದ್ದೆಯಲ್ಲಿ ತುಂಬಿದ ನೀರು ರಸ್ತೆಯ ಅಡಿಯಲ್ಲಿ ಅಳವಡಿಸಲಾದ ಮೋರಿಯಲ್ಲಿ ಹಾದು ಹೋಗಲು ಸಾಧ್ಯವಾಗದೆ ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಯಿತ್ತೆನ್ನ ಲಾಗಿದೆ.

ಇಂದು ಸಂಜೆ 4ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇದರಿಂದ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮಸ್ಥರು ಪೆರ್ಡೂರಿ ನೊಂದಿಗೆ ಸಂಪರ್ಕ ಕಡಿದು ಕೊಂಡಿದ್ದಾರೆ.

ಅನ್ನಾಲು ಸೇತುವೆ ಬಳಿ ಈ ಮೋರಿ ಸಿಂಕ್ ಆಗಿ ನಂತರ ರಸ್ತೆಯ ಒಂದು ಭಾಗ ಕುಸಿತ ಕಂಡಿತು. ಈ ವೇಳೆ ಎರಡು ಭಾಗದಲ್ಲಿ ಜನ ಸೇರಿದ್ದು, ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಜನ ನೋಡುತ್ತಿದ್ದಂತೆಯೇ ಸುಮಾರು 35ಅಡಿಯಷ್ಟು ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತೆನ್ನಲಾಗಿದೆ. ಈ ರಸ್ತೆಯ ಮಣ್ಣು ಗದ್ದೆಗೆ ಕೊಚ್ಚಿಕೊಂಡು ಹೋದ ಪರಿಣಾಮ ಕೃಷಿಗೆ ಅಪಾರ ಹಾನಿ ಉಂಟಾಗಿದೆ.

ಕಳೆದ ವರ್ಷ ಹರಿಖಂಡಿಗೆ- ಪೆರ್ಡೂರು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು, ಇದೀಗ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮದವರು ಪೆರ್ಡೂರು ತಲುಪಬೇಕಾದರೆ ಐದು ಕಿ.ಮೀ. ದೂರದ ಕುಂಟಾಲಕಟ್ಟೆ ಮಾರ್ಗ ವಾಗಿ ಸಾಗಬೇಕಾಗಿದೆ. ಇದರಿಂದ ಗ್ರಾಮಸ್ಥರು ತೀರಾ ತೊಂದರೆ ಅನುಭವಿಸುವಂತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯಡ್ಕ ಪೊಲೀಸರು ರಸ್ತೆಯ ಎರಡು ಕಡೆಗಳಲ್ಲಿಯೂ ಬ್ಯಾರಿಕೇಡ್ ಆಳವಡಿಸಿ ಸಂಚಾರವನ್ನು ಬಂದ್ ಮಾಡಿದ್ದಾರೆ.

ಅಲ್ಲದೆ ಇಡೀ ಪರಿಸರದಲ್ಲಿ ದಿಢೀರ್ ಸುರಿದ ಮಳೆಯಿಂದ ನೀರು ತೋಡಿನಲ್ಲಿ ಹರಿದು ಹೋಗಲು ಸಾಧ್ಯವಾಗದೆ ಹಲವು ಕಡೆಗಳಲ್ಲಿ ಕೃತಕ ನೆರೆ ಉಂಟಾಯಿತು. ಇದರಿಂದ ಸುಮಾರು 25ಕ್ಕೂ ಅಧಿಕ ಎಕರೆ ಗದ್ದೆಯಲ್ಲಿ ಕಟಾವು ಮಾಡಿ ಇರಿಸಿದ್ದ ಭತ್ತದ ಕೃಷಿ ಹಾಳಾಗಿದೆ. ಹೆಚ್ಚಿನವು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಲವು ಕಡೆ ರಸ್ತೆಯಲ್ಲಿ ನೀರು ಹರಿದು ಹೋಗುತ್ತಿದ್ದ ಪರಿಣಾಮ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ.

ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ಸದಾಶಿವ ಪೂಜಾರಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ನಾಯ್ಕಿ, ಗ್ರಾಮ ಲೆಕ್ಕಿಗ ಅಭಿಷೇಕ್ ಮೊದ ಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಡಿಲಿಗೆ ಜಾನುವಾರು ಬಲಿ: ಅಪರಾಹ್ನದ ಬಳಿಕ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಮಳೆ ದಿಢೀರ್ ಆಗಿ ಗುಡುಗು, ಸಿಡಿಲಿನೊಂದಿಗೆ ಸುರಿದಿದ್ದು, ಇದರಿಂದ ಅಲ್ಲಲ್ಲಿ ಹಾನಿ ಸಂಭವಿಸಿದ ವರದಿಗಳು ಬಂದಿವೆ. ಬ್ರಹ್ಮಾವರದ ಕರ್ಜೆಯ ಹೊಸೂರಿನಲ್ಲಿ ಹೇಮಾವತಿ ಶೆಟ್ಟಿ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದಿದ್ದು, ಇದರಿಂದ ಅಲ್ಲಿದ್ದ ಹಾಲು ಕೊಡುವ ದನವೊಂದು ಮೃತಪಟ್ಟಿದೆ. ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿದ್ದಾರೆ.

ಕುಕ್ಕೆಹಳ್ಳಿ ಆಸುಪಾಸಿನಲ್ಲಿ 4-5 ಮನೆಗಳಿಗೆ ಹಾಗೂ ಹೊಸೂರಿನಲ್ಲಿ ಇನ್ನೊಂದು ಮನೆಗೂ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಕುಂದಾಪುರ, ಕೋಟ, ಬ್ರಹ್ಮಾವರ, ಹಿರಿಯಡ್ಕಗಳಿಂದಲೂ ಭಾರೀ ಮಳೆಯಾಗಿರುವ ಬಗ್ಗೆ ವರದಿಗಳು ಬಂದಿವೆ.

‘ ಸ್ಪೋಟ’: ಸ್ಥಳೀಯರಲ್ಲಿ ಆತಂಕ

ಅಪರಾಹ್ನ ಒಂದು ಗಂಟೆಯಿಂದ ಸಂಜೆ ನಡುವೆ ಒಮ್ಮಿಂದೊಮ್ಮೆಗೆ ಸುರಿದ ಭಾರೀ ಮಳೆ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಅಲ್ಪಾವಧಿಯಲ್ಲಿ ಸುರಿದ ಮಳೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ.

‘ಮಳೆಯ ನೀರು ತೋಡಿನಲ್ಲಿ ಹರಿದುಹೋಗಲು ಸಾಧ್ಯವಾಗದೆ ಎಲ್ಲ ಕಡೆ ನೆರೆ ಉಂಟಾಗಿದೆ. ಈವರೆಗೆ ಈ ಗ್ರಾಮ ಇಂತಹ ಮಳೆಯನ್ನು ನೋಡಿಲ್ಲ. ಹಿಂದೆ ಇದಕ್ಕಿಂತ ಹೆಚ್ಚು ಮಳೆಬಂದರೂ ಇಂತಹ ಅನಾಹುತಗಳು ಸಂಭವಿಸಿಲ್ಲ. ಇದು ಮೇಘಸ್ಪೋಟದ ರೀತಿಯಲ್ಲಿ ಸಂಭವಿಸಿರುವ ಮಳೆಯಾಗಿದೆ’ ಎಂದು ಬೈರಂಪಳ್ಳಿ ಗ್ರಾಪಂ ಅ್ಯಕ್ಷ ಸದಾಶಿವ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News