ಉಡುಪಿ ಜಿಲ್ಲೆಯ 4.01ಲಕ್ಷ ಮತದಾರರಿಂದ ಮಾತ್ರ ಇವಿಪಿ ಬಳಕೆ: ಜಿಲ್ಲಾಧಿಕಾರಿ

Update: 2019-10-15 15:12 GMT

ಉಡುಪಿ, ಅ.15: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಸೆ.1ರಿಂದ ನಡೆಯುತ್ತಿರುವ ಮತದಾರರ ಪರಿಶೀಲನಾ ಕಾರ್ಯಕ್ರಮ (ಇವಿಪಿ)ವನ್ನು ಜಿಲ್ಲೆಯ ಕೇವಲ 4,01,292 ಮತದಾರರ ಸದುಪಯೋಗ ಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 10,06,705 ಮಂದಿ ಮತದಾರರಿದ್ದು, ಇವರಲ್ಲಿ 4,01,292 ಮಂದಿ ಮತದಾರರು ಮಾತ್ರ ಈವರೆಗೆ ಇವಿಪಿ ಕಾರ್ಯಕ್ರಮದಲ್ಲಿ ಪರಿಶೀಲನೆ ಮಾಡಿದ್ದು, ಇನ್ನೂ 6,05,413 ಮತದಾರರ ಪರಿಶೀಲನಾ ಕಾರ್ಯ ನಡೆಯಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳಲು ಇಂದೊಂದು ಸುವರ್ಣಾವಕಾಶವಾಗಿದ್ದು, ಈ ಕಾರ್ಯಕ್ರಮವನ್ನು ನವೆಂಬರ್ 18ರವರೆಗೆ ಭಾರತ ಚುನಾವಣಾ ಆಯೋಗ ವಿಸ್ತರಿಸಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಎಲ್ಲಾ ನಾಗರಿಕರು ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಜಿಲ್ಲೆಯ ಮತದಾರರು ಮತದಾರರ ಪಟ್ಟಿಯಲ್ಲಿರುವ ಅವರ ಮಾಹಿತಿಯನ್ನು ಈ ಕೆಳಗಿನ ಕೇಂದ್ರಗಳಲ್ಲಿ ಅಥವಾ ವೆಬ್‌ಸೈಟ್ ಮೂಲಕ ಕೂಡಾ ಪಟ್ಟಿಯಲ್ಲಿ ನಮೂದಾಗಿರುವ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಿ ಕೊಳ್ಳಬಹುದು.

ಮತದಾರರ ಸಹಾಯವಾಣಿ ಮೊಬೈಲ್‌ಆ್ಯಪ್(ವೋಟರ್ ಹೆಲ್ಫ್‌ಲೈನ್) ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ), ಮತದಾರ ನೊಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಉಡುಪಿ ಒನ್/ಕರ್ನಾಟಕ ಒನ್, 1950 (ಮತದಾರರ ಸಹಾಯವಾಣಿ ಕೇಂದ್ರ). ಇವಲ್ಲದೇ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲಾ ಕಾರ್ಯವನ್ನು ಮಾಡುತಿದ್ದಾರೆ.

ಆದ್ದರಿಂದ ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಮತದಾರರು ಅವರ ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ ತಿದ್ದುಪಡಿಗಳು ಇದ್ದಲ್ಲಿ ಸರಿಪಡಿಸಿ ದೃಢಪಡಿಸುವಂತೆ ಜಿಲ್ಲೆಯ ಪ್ರತಿಯೊಬ್ಬ ಮತದಾರರಲ್ಲಿ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News