ಜಿಲ್ಲಾ ಕನ್ನಡ ರಾಜೋತ್ಸವ; ಮಣಿಪಾಲದಲ್ಲಿ ಪೂರ್ವಭಾವಿ ಸಭೆ

Update: 2019-10-15 15:16 GMT

ಉಡುಪಿ, ಅ.15: ಬೀಡಿನಗುಡ್ಡೆಯ ಬಯಲು ರಂಗಮಂದಿರದಲ್ಲಿ ನವೆಂಬರ್ 1ರಂದು ನಡೆಯುವ ಕನ್ನಡ ರಾಜೋತ್ಸವವನ್ನು ಅತ್ಯಂತ ವೈಭವ ದಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯಪ್ರವೃತ್ತ ವಾಗುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡುತಿದ್ದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಕಲೆ ಸಂಸ್ಕೃತಿ ಹಾಗೂ ವಿವಿಧ ಇಲಾಖೆಗಳ ಸಾಧನೆ ಬಿಂಬಿಸುವ ಹೆಚ್ಚಿನ ಸಂಖ್ಯೆಯ ಸ್ಥಬ್ಧಚಿತ್ರಗಳ ಮೆರವಣಿಗೆ ಆಯೋಜಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ಭುವನೇಶ್ವರಿ ದೇವಿಯ ಸ್ಥಬ್ಧಚಿತ್ರವನ್ನು ಜೊತೆಗೆ ನಗರಸಭೆಯಿಂದ ಸ್ವಚ್ಛ ಭಾರತ್ ಪ್ಲಾಸ್ಟಿಕ್ ನಿರ್ಮೂಲನೆ ಕುರಿತು, ತೋಟಗಾರಿಕೆಯಿಂದ ಅಣಬೆ ಬೇಸಾಯ, ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ದತಿ, ನಿರ್ಮಿತಿ ಕೇಂದ್ರದ ಮೂಲಕ ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ಸ್ಥಬ್ದಚಿತ್ರ, ಅರಣ್ಯ ಇಲಾಖೆಯಿಂದ ಹಸಿರು ಕರ್ನಾಟಕ, ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ ಹಾಗೂ ಸಾಂಕ್ರಾಮಿಕ ರೋಗ ನಿರ್ಮೂಲನೆ ಹಾಗೂ ಪ್ರವಾಸೋದ್ಯಮ, ಕೈಗಾರಿಕೆ, ಕಾರ್ಮಿಕ ಇಲಾಖೆ ಯಿಂದ ಸಹ ಸ್ಥಬ್ದಚಿತ್ರ ನಿರ್ಮಿಸುವಂತೆ ತಿಳಿಸಿದ ಅವರು, ಟ್ಯಾಬ್ಲೋಗಳು ಸ್ಪರ್ಧಾತ್ಮಕ ಹಾಗೂ ಹೊಸತನದಿಂದ ಕೂಡಿರಲಿ. 3 ಅತ್ಯುತ್ತಮ ಸ್ಧಬ್ದಚಿತ್ರಗಳಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 8 ವಿವಿಧ ಕಲಾತಂಡಗಳ ಮೂಲಕ ವೈವಿದ್ಯತೆಯಿಂದ ಕೂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಮೆರವಣಿಗೆಯಲ್ಲಿ ಏರ್ಪಡಿಸುವಂತೆ ಹಾಗೂ ಬೀಡನಗುಡ್ಡೆಯ ಬಯಲು ರಂಗ ಮಂದಿರದಲ್ಲಿ ಶಾಲಾ ಮಕ್ಕಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಕಲೆ, ಸಾಹಿತ್ಯ, ಸಮಾಜ ಸೇವೆ, ಕ್ರೆಡೆಯಲ್ಲಿ ಸಾಧನೆ ಮಾಡಿದವರಿಗೆ ಮತ್ತು ಸಂಘಸಂಸ್ಥೆಗಳಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸುವವರು ಅ.22ರೊಳಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು ಪ್ರಭು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಗುರುತಿಸಿ ್ರಶಸ್ತಿ ನೀಡಲಾಗುವುದು ಎಂದರು.

ನ.1ರಂದು ಬೆಳಗ್ಗೆ ಬೋರ್ಡ್ ಹೈಸ್ಕೂಲ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಗೂ ನಂತರ ನಡೆಯುವ ಮೆರವಣಿಗೆ ಮತ್ತು ಬೀಡಿನಗುಡ್ಡೆಯ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಎಲ್ಲಾ ಸರಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ ಅಪರ ಜಿಲ್ಲಾಧಿಕಾರಿ, ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

 ಸಭೆಯಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News