ಜನರ ಆದಾಯ ಹೆಚ್ಚಿಸುವ ಬದಲು ಭ್ರಮೆ ಸೃಷ್ಠಿ: ಬಾಲಕೃಷ್ಣ ಶೆಟ್ಟಿ

Update: 2019-10-15 15:27 GMT

ಉಡುಪಿ, ಅ.15: ಕೇಂದ್ರ ಸರಕಾರ ದೇಶದ ಎಲ್ಲ ಜಾತಿ ಧರ್ಮಗಳ ಜನರ ಆದಾಯ ಹೆಚ್ಚಿಸುವ ಆರ್ಥಿಕ ನೀತಿಯನ್ನು ಜಾರಿಗೆ ತರಬೇಕು. ಅದು ಬಿಟ್ಟು ಬೀಚ್‌ಗಳಲ್ಲಿ ಪ್ಲಾಸ್ಟಿಕ್ ಹೆಕ್ಕುವುದರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ. ಕೇಂದ್ರ ಸರಕಾರ ಜನರ ನಿಜವಾದ ಆದಾಯ ಹೆಚ್ಚಿಸುವ ಬದಲು ಅವರಲ್ಲಿ ಭ್ರಮೆ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ವಿರುದ್ಧ ಎಡಪಕ್ಷಗಳು ಕರೆ ನೀಡಿದ ಅಖಿಲ ಭಾರತ ಪ್ರತಿಭಟನೆಯ ಭಾಗವಾಗಿ ಮಂಗಳವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರಚಾರ ಜಾಥದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಮೂಲಕ ಸರಕಾರದ ರೈಲ್ವೆ ಹಳಿ, ನಿಲ್ದಾಣ, ಸಿಬ್ಬಂದಿಗಳನ್ನು ಬಳಸಿಕೊಂಡು ಖಾಸಗಿಯವರು ಹಣ ದೋಚುವಂತೆ ಮಾಡಲಾಗುತ್ತಿದೆ. ಸರಕಾರ ಬಿಎಸ್‌ಎನ್‌ಎಲ್ ನಷ್ಟದಲ್ಲಿದೆ ಎಂದು ಬಿಂಬಿಸಿ ಮುಚ್ಚುವಂತೆ ಮಾಡಿ ಜಿಯೋ ಕಂಪೆನಿಗೆ ಲಾಭ ಮಾಡಲು ಹೊರಟಿದೆ. ದೇಶದಲ್ಲಿ ಪ್ರತಿಯೊಬ್ಬರ ಆದಾಯ ಕುಸಿತವಾಗಿ ಅರ್ಥವ್ಯವಸ್ಥೆ ಹಿನ್ನಡೆ ಕಾಣುತ್ತಿದೆ ಎಂದು ಅವರು ದೂರಿದರು.

ವಿದೇಶಿ ಉದ್ಯಮದಾರರಿಗೆ ಬಂಡವಾಳ ಹೂಡಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗಿದೆ. ಖಾಸಗಿಯವರ ಶೇರು ಹೆಚ್ಚಿಸಿ ಮುಂದೆ ಎಲ್ಲ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಇದರ ಹಿಂದೆ ಇದೆ. ದೇಶದ ಶೇ.40ರಷ್ಟು ಗ್ರಾಮಗಳಲ್ಲಿ ಬ್ಯಾಂಕ್‌ಗಳೇ ಇಲ್ಲ. ಈಗಾಗಲೇ ಮಾಡಿರುವ ಬ್ಯಾಂಕ್‌ಗಳ ವಿಲೀನದಿಂದ ಗ್ರಾಮೀಣ ಪ್ರದೇಶದ 800 ಶಾಖೆಗಳು ಮುಚ್ಚಿವೆ ಎಂದು ಅವರು ತಿಳಿಸಿದರು.

ಸಿಪಿಎಂ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖರ್ ಎಲ್. ಮಾತನಾಡಿ, ಕೇಂದ್ರ ಸರಕಾರದ ಖಾಸಗೀಕರಣ ನೀತಿಯಿಂದ ಉದ್ಯಮಗಳು ಮುಚ್ಚುತ್ತಿವೆ. ಬೀಡಿಕಾರ್ಮಿಕರು ಕೆಲಸ ಇಲ್ಲದೆ ಬೀದಿ ಪಾಲಾಗುತ್ತಿದ್ದಾರೆ. ಕಾರ್ಮಿಕರ ಕಾಯಿದೆ ತಿದ್ದುಪಡಿ ಮಾಡಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಶಂಕರ್, ಸಿಪಿಐ ಉಡುಪಿ ತಾಲೂಕು ಕಾರ್ಯದರ್ಶಿ ಕೆ.ವಿ.ಭಟ್, ಸಿಪಿಎಂ ಮುಖಂಡರಾದ ಸುರೇಶ್ ಕಲ್ಲಾಗರ್, ಕವಿರಾಜ್, ಬಲ್ಕೀಸ್ ಕುಂದಾಪುರ, ಶಶಿಧರ ಗೊಲ್ಲ, ಎಚ್.ನರಸಿಂಹ, ರಾಜೀವ್ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News