ಅಭಿಜಿತ್ ಬ್ಯಾನರ್ಜಿ ಪರಿಕಲ್ಪನೆಯ ಕನಿಷ್ಟ ಆದಾಯ ಖಾತ್ರಿ ಯೋಜನೆ ನಿಜವಾಗಲಿ: ಪ್ರಿಯಾಂಕಾ ಗಾಂಧಿ

Update: 2019-10-15 15:36 GMT

ಹೊಸದಿಲ್ಲಿ,ಅ.15: ಅರ್ಥಶಾಸ್ತ್ರ ವಿಭಾಗದಲ್ಲಿ ನೋಬೆಲ್ ಗೆದ್ದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಶುಭಾಶಯ ಕೋರಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಬ್ಯಾನರ್ಜಿ ಪರಿಕಲ್ಪನೆಯಲ್ಲಿ ರೂಪುಗೊಂಡ ಕಾಂಗ್ರೆಸ್ ಪಕ್ಷದ ಸರ್ವರಿಗೂ ಕನಿಷ್ಟ ಆದಾಯ ಖಾತ್ರಿ ಯೋಜನೆ ನ್ಯಾಯ್ ಒಂದು ದಿನ ನಿಜವಾಗಲು ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಜಾಗತಿಕ ಬಡತನ ನಿವಾರಣೆಗಾಗಿ ಪ್ರಾಯೋಗಿಕ ದೃಷ್ಟಿಕೋನಕ್ಕಾಗಿ ಬ್ಯಾನರ್ಜಿ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ತನ್ನ ಪತ್ನಿ ಎಸ್ತರ್ ಡಫ್ಲೊ ಮತ್ತು ಇನ್ನೋರ್ವ ಅರ್ಥಶಾಸ್ತ್ರಜ್ಞ ಮೈಕಲ್ ಕ್ರೆಮರ್ ಜೊತೆ ಪಡೆದುಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಗೆದ್ದ, ಬಡತನ ನಿವಾರಣೆಗಾಗಿ ಸಂಶೋಧನೆ ನಡೆಸುವ ಭಾರತೀಯ ಮೂಲದ ಉಪನ್ಯಾಸಕ ಅಭಿಜಿತ್ ಬ್ಯಾನರ್ಜಿ ಅವರಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಸೋಮವಾರ ಬ್ಯಾನರ್ಜಿ ಅವರಿಗೆ ಶುಭಾಶಯ ಕೋರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಪಕ್ಷ ಪ್ರಸ್ತಾವಿಸಿದ್ದ ನ್ಯಾಯ್ ಯೋಜನೆಯ ಬ್ಯಾನರ್ಜಿ ಪರಿಕಲ್ಪನೆಯಾಗಿದೆ ಎಂದು ತಿಳಿಸಿದ್ದರು. ಅಭಿಜಿತ್ ರೂಪಿಸಿದ್ದ ನ್ಯಾಯ್ ಯೋಜನೆಗೆ ಬಡತನವನ್ನು ಹೋಗಲಾಡಿಸುವ ಮತ್ತು ಭಾರತದ ಆರ್ಥಿಕತೆಯನ್ನು ಸುಧಾರಿಸುವ ಸಾಮರ್ಥ್ಯವಿತ್ತು. ಅದರ ಬದಲು ನಮ್ಮಲ್ಲಿರುವುದು ಮೋದಿನೋಮಿಕ್ಸ್, ಅದು ಆರ್ಥಿಕತೆಯನ್ನು ನಾಶಗೊಳಿಸುತ್ತಿದೆ ಮತ್ತು ಬಡತನವನ್ನು ಹೆಚ್ಚುಗೊಳಿಸುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News