ಗುರುಪುರ-ಕೈಕಂಬ: ಆರ್ಥಿಕ ಬಿಕ್ಕಟ್ಟು ವಿರುದ್ಧ ಸಾರ್ವಜನಿಕ ಸಭೆ

Update: 2019-10-15 15:48 GMT

ಕೈಕಂಬ, ಅ.15: ದೇಶದಲ್ಲಿ ಈಗ ಹೆಚ್ಚಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟದ ವಿರುದ್ಧ ಎಡಪಕ್ಷಗಳ ಅಖಿಲ ಭಾರತ ಪ್ರತಿಭಟನಾರ್ಥವಾಗಿ ಸಿಪಿಎಂ ಗುರುಪುರ ವಲಯ ಸಮಿತಿ ವತಿಯಿಂದ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ‘ಸಾರ್ವಜನಿಕ ಸಭೆ’ ನಡೆಯಿತು.

ಸಿಪಿಎಂ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಹಿಂದಿನ ಐದು ವರ್ಷದ ಆಡಳಿತಾವಧಿಯಲ್ಲಿ ಏನೂ ಸಾಧಿಸಲಾಗಿಲ್ಲ ಎಂದಿರುವ ಪ್ರಧಾನಿ ಮೋದಿ 2019ರ ಮಹಾಚುನಾವಣೆ ಹೊತ್ತಿಗೆ ಎನ್‌ಡಿಎಗೆ ಇನ್ನು ಐದು ವರ್ಷಗಳ ಅವಕಾಶ ಕೊಡಿ ಎಂದು ಪ್ರಚಾರ ನಡೆಸಿದ್ದರು. ಆದರೆ ಎರಡನೇ ಅವಧಿಗೆ ಅಧಿಕಾರ ಹಿಡಿದ ಎನ್‌ಡಿಎ ದುರಾಡಳಿತಕ್ಕೆ ಹೆಸರಾಗಿದ್ದು, ದೇಶದಲ್ಲಿ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟು, ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದ್ದು, ಸರಕಾರ ರಿಸರ್ವ್ ಬ್ಯಾಂಕ್‌ನ ‘ಭದ್ರತಾ ಹಣ’ ಪಡೆದುಕೊಂಡಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ಪ್ರಸಂಗ ನಡೆದಿದೆ. ಜಿಡಿಪಿ ಕಡಿಮೆಯಾಗಿದೆ ಎಂದರು.

ಜಿಡಿಪಿ ಕುಸಿಯುತ್ತಲೇ ಇದೆ. ಜವುಳಿ, ಕಟ್ಟಡ ನಿರ್ಮಾಣ ಉದ್ದಿಮೆ ಕುಸಿದಿದೆ. ರೈತಾಪಿ ವರ್ಗ ಕಂಗಾಲಾಗಿದೆ. ಬಡತನ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶದ ಜನರ ದೃಷ್ಟಿ ಬೇರೆಡೆಗೆ ಹರಿಸುವ ನಿಟ್ಟಿನಲ್ಲಿ ‘ಹಿಂದೂವಾದ’ ಅಸ್ತ್ರ ಪ್ರಯೋಗಿಸುತ್ತಿದೆ. ಜನಸಾಮಾನ್ಯರಿಗೆ ಸಂದಾಯವಾಗಬೇಕಿರುವ ಕೆಲವು ಮಹತ್ವದ ನಿಧಿ ಕಬಳಿಸಲು ಸರಕಾರ ಹೊಂಚು ಹಾಕಿದ್ದು, ತನ್ನ ಗೆಲುವಿಗೆ ಕೋಟ್ಯಂತರ ಹಣ ಒದಗಿಸಿದ ಅಂಬಾನಿ, ರಿಲಯನ್ಸ್, ಬಿರ್ಲಾರಂತಹವರ ಕಂಪೆನಿಗಳಿಗೆ ಲಾಭ ತಂದುಕೊಡುವಂತಹ ನೀತಿ ರೂಪಿಸುತ್ತಿದೆ. ಬಿಎಸ್ಸೆನ್ನೆಲ್, ಶಸ್ತ್ರಾಸ್ತ್ರ ಕಾರ್ಖಾನೆ, ಭಾರತೀಯ ರೈಲ್ವೇ, ಏರ್ ಇಂಡಿಯಾ ಸಂಸ್ಥೆಗಳ ಖಾಸಗೀಕರಣಕ್ಕೆ ಮೋದಿ ಸರಕಾರ ಹುನ್ನಾರ ನಡೆಸುತ್ತಿದೆ ಎಂದು ಬಾಲಕೃಷ್ಣ ಶೆಟ್ಟಿ ಟೀಕಿಸಿದರು.

ಸಿಪಿಎಂ ಗುರುಪುರ ವಲಯ ಸಮಿತಿಯ ಸದಸ್ಯ ಯುಬಿ ಲೋಕಯ್ಯ ಮಾತನಾಡಿದರು.ಸಿಪಿಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಕೆ.ಸದಾಶಿವ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಿಪಿಎಂ ಗುರುಪುರ ವಲಯ ಸಮಿತಿಯ ಸದಸ್ಯ ಗಂಗಯ್ಯ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News