ಎಫ್‌ಎಟಿಎಫ್‌ನ ‘ಕಡು ಬೂದು’ ಪಟ್ಟಿಯಲ್ಲಿ ಪಾಕ್‌ಗೆ ಸ್ಥಾನ?

Update: 2019-10-15 17:19 GMT

 ಪ್ಯಾರಿಸ್, ಅ. 15: ಭಯೋತ್ಪಾದನೆಗೆ ಹಣಕಾಸು ಪೂರೈಸುವವರ ಮೇಲೆ ಕಣ್ಣಿಡುವ ಅಂತರ್‌ರಾಷ್ಟ್ರೀಯ ನಿಗಾ ಸಂಸ್ಥೆ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)’ನ ತೀವ್ರ ಕ್ರಮಗಳಿಗೆ ಪಾಕಿಸ್ತಾನ ಗುರಿಯಾಗುವ ಸಾಧ್ಯತೆ ಅಧಿಕವಾಗಿದೆ. ಅದು ಪಾಕಿಸ್ತಾನವನ್ನು ‘ಕಡು ಬೂದಿ’ ಪಟ್ಟಿಯಲ್ಲಿ ಇಡುವ ಸಂಭವವಿದೆ. ಅಂದರೆ, ಸುಧಾರಿಸಲು ಇದು ಪಾಕಿಸ್ತಾನಕ್ಕೆ ಕೊನೆಯ ಅವಕಾಶ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಎಫ್‌ಎಟಿಎಫ್‌ನ ಪೂರ್ಣಾಧಿವೇಶನ ನಡೆಯುತ್ತಿದೆ. ಭಯೋತ್ಪಾದನೆಗೆ ಹಣಕಾಸು ಪೂರೈಕೆಯಾಗುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿರುವುದಕ್ಕಾಗಿ ಪಾಕಿಸ್ತಾನವು ಎಫ್‌ಎಟಿಎಫ್‌ನ ಎಲ್ಲ ಸದಸ್ಯ ದೇಶಗಳಿಂದ ಪ್ರತ್ಯೇಕಗೊಳ್ಳಲಿದೆ ಎಂದು ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳು ಹೇಳಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ಪೂರೈಕೆಗೆ ಸಂಬಂಧಿಸಿದ 27 ವಿಷಯಗಳ ಪೈಕಿ ಪಾಕಿಸ್ತಾನ 6ರಲ್ಲಿ ಮಾತ್ರ ತೇರ್ಗಡೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಫ್‌ಎಟಿಎಫ್ ಪಾಕಿಸ್ತಾನ ಕುರಿತ ತನ್ನ ನಿರ್ಧಾರವನ್ನು ಅಕ್ಟೋಬರ್ 18ರಂದು ಅಂತಿಮಗೊಳಿಸಲಿದೆ.

ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗೆ ಬೆದರಿಕೆಯಾಗಿರುವ ಕಪ್ಪು ಹಣ ಬಿಳುಪು, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಹಾಗೂ ಇತರ ಕೃತ್ಯಗಳ ವಿರುದ್ಧ ಹೊರಾಡಲು ಎಫ್‌ಎಟಿಎಫ್ ಎಂಬ ಅಂತರ್‌ಸರಕಾರೀಯ ಸಂಸ್ಥೆಯೊಂದನ್ನು 1989ರಲ್ಲಿ ಸ್ಥಾಪಿಸಲಾಯಿತು.

‘ಬೂದು’ ಮತ್ತು ‘ಕಪ್ಪು’ ನಡುವಿನ ಹಂತ

ಎಫ್‌ಎಟಿಎಫ್ ನಿಯಮಗಳ ಪ್ರಕಾರ, ‘ಬೂದು’ ಮತ್ತು ‘ಕಪ್ಪು’ ಪಟ್ಟಿಗಳ ನಡುವೆ ಪ್ರಮುಖ ಹಂತವೊಂದಿದ್ದು, ಅದನ್ನು ‘ಕಡು ಬೂದು’ ಎಂದು ಕರೆಯಲಾಗುತ್ತದೆ.

ದೇಶವೊಂದನ್ನು ‘ಕಡು ಬೂದು’ ಪಟ್ಟಿಯಲ್ಲಿಡುವುದು ಎಂದರೆ ಅದಕ್ಕೆ ಪ್ರಬಲ ಎಚ್ಚರಿಕೆಯೊಂದನ್ನು ನೀಡುವುದು. ಈ ಮೂಲಕ, ಸಂಬಂಧಪಟ್ಟ ದೇಶಕ್ಕೆ ಸುಧಾರಿಸಲು ಕೊನೆಯ ಅವಕಾಶವೊಂದನ್ನು ನೀಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News