ದೇವಾಲಯದಿಂದ ಕಳವುಗೈದ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ

Update: 2019-10-15 18:08 GMT

ಹೈದರಾಬಾದ್, ಅ. 15: ದೇವಾಲಯದಿಂದ ಕಳವುಗೈದಿರುವುದಾಗಿ ಶಂಕಿಸಿ 25 ವರ್ಷದ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ತೆಲಂಗಾಣದ ನಿಝಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ದೇವಾಲಯದಿಂದ ಕಳವುಗೈದ ಶಂಕೆಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಗ್ರಾಮ ನಿವಾಸಿಗಳ ಗುಂಪು ಥಳಿಸಿದೆ. ಅನಂತರ ಪೊಲೀಸರಿಗೆ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ನಿಝಾಮಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

 “ನನ್ನ ಪತಿ ದೇವಾಲಯದಿಂದ ಕಳವುಗೈಯಲು ಪ್ರಯತ್ನಿಸಿದ್ದಾರೆ ಎಂದು ಶಂಕಿಸಿ ಗ್ರಾಮ ನಿವಾಸಿಗಳ ಗುಂಪೊಂದು ಥಳಿಸಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೋಮವಾರ ರಾತ್ರಿ ತಾನು ಸ್ವೀಕರಿಸಿದ ಫೋನ್ ಕರೆಯೊಂದರಿಂದ ತಿಳಿಯಿತು” ಎಂದು ವ್ಯಕ್ತಿಯ ಪತ್ನಿ ತಿಳಿಸಿದ್ದಾರೆ.

 “ಅನಂತರ ಕರೆ ಮಾಡಿದವರು ಆಸ್ಪತ್ರೆಗೆ ಭೇಟಿ ನೀಡುವಂತೆ ತಿಳಿಸಿದರು. ನನ್ನ ಪತಿಗೆ ಥಳಿಸುವುದರ ಬದಲು ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲ ಎಂದು ನಾನು ಕರೆ ಮಾಡಿದವರಲ್ಲಿ ಪ್ರಶ್ನಿಸಿದೆ. ಸೋಮವಾರ ಬೆಳಗ್ಗೆ ನಾನು ಆಸ್ಪತ್ರೆಗೆ ಭೇಟಿ ನೀಡಿದೆ. ಆಗ ನನ್ನ ಪತಿ ಮೃತಪಟ್ಟಿದ್ದರು” ಎಂದು ಅವರು ಹೇಳಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News