ದೇಶದ ಎಲ್ಲಾ ಮಸೀದಿಗಳಿಗೆ ರಕ್ಷಣೆ ನೀಡಿದರೆ ಬಾಬರಿ ಮಸೀದಿ ಸ್ಥಳದ ಹಕ್ಕನ್ನು ಬಿಟ್ಟುಕೊಡುತ್ತೇವೆ

Update: 2019-10-16 12:56 GMT

ಹೊಸದಿಲ್ಲಿ, ಅ.16: ಭಾರತದಲ್ಲಿರುವ ಎಲ್ಲಾ ಪ್ರಾರ್ಥನಾಲಯಗಳಿಗೆ ಅತಿಕ್ರಮಣಗಳಿಂದ ರಕ್ಷಣೆ ನೀಡುವ ಬಗ್ಗೆ ಕೇಂದ್ರ ಸರಕಾರವು ಖಾತರಿ ನೀಡುವುದಾದರೆ ಬಾಬರಿ ಮಸೀದಿ ವಿಚಾರದಲ್ಲಿ ತನ್ನ ಅಪೀಲನ್ನು ಕೈಬಿಡುವುದಾಗಿಯೂ, ಶತಮಾನಗಳ ಕಾಲ ಐತಿಹಾಸಿಕ ಬಾಬರಿ ಮಸೀದಿ ನೆಲೆನಿಂತಿದ್ದ ಜಾಗದ ಮೇಲಿನ ಹಕ್ಕನ್ನು ಬಿಟ್ಟು ಕೊಡುವುದಾಗಿಯೂ ಸುನ್ನಿ ವಕ್ಫ್ ಬೋರ್ಡ್ ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿರುವುದಾಗಿ thewire.in ವರದಿ ಮಾಡಿದೆ.

ಇಂದು ಸಂಜೆಯವರೆಗೆ ಸುಪ್ರೀಂ ಕೋರ್ಟ್ ಎಲ್ಲಾ ವಾದಗಳನ್ನು ಆಲಿಸಿದ್ದು, ತೀರ್ಪು ಕಾದಿರಿಸಿರುವುದಾಗಿ ತಿಳಿಸಿದೆ.

ಮಧ್ಯಸ್ಥಿಕೆ ಪ್ರಸ್ತಾಪ

ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿರುವ ಕೊನೆಯ ದಿನವಾದ ಬುಧವಾರ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠವು ಇಂದು ರಾಮಜನ್ಮಭೂಮಿ ನ್ಯಾಸ್, ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಬೋರ್ಡ್ ನ ವಾದವಿವಾದಗಳನ್ನು ಆಲಿಸಿತು.

ನವೆಂಬರ್ ತಿಂಗಳಲ್ಲಿ ರಂಜನ್ ಗೊಗೊಯಿಯವರು ನಿವೃತ್ತರಾಗಲಿದ್ದು, ಆ ಸಮಯದಲ್ಲೇ ಈ ಬಗೆಗಿನ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಸುನ್ನಿ ವಕ್ಫ್ ಬೋರ್ಡ್ ಮತ್ತು ಕೆಲ ದಾವೆದಾರರು ಸಂಧಾನ ಪ್ರಸ್ತಾಪಕ್ಕೆ ಸಹಿ ಹಾಕಿದ್ದಾರೆ. ಆದರೆ ಎಲ್ಲಾ ಹಿಂದೂ ಅರ್ಜಿದಾರರು ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿದ್ದಾಗಿ thewire.in ವರದಿ ಮಾಡಿದೆ. ವಿಎಚ್ ಪಿ ಬೆಂಬಲಿತ ರಾಮನ್ಮಭೂಮಿ ನ್ಯಾಸ್ ಮಧ್ಯಸ್ಥಿಕೆಯ ಷರತ್ತುಗಳನ್ನು ಒಪ್ಪಿಲ್ಲ ಎನ್ನಲಾಗಿದೆ.

ಭಾರತದಲ್ಲಿರುವ ಎಲ್ಲಾ ಮಸೀದಿಗಳ ರಕ್ಷಣೆಯ ಜೊತೆಗೆ ಅಯೋಧ್ಯೆಯಲ್ಲಿರುವ 22 ಮಸೀದಿಗಳ ಜೀರ್ಣೋದ್ಧಾರ, ಬಾಬರಿ ಮಸೀದಿ ಸಮೀಪದಲ್ಲೇ ಮತ್ತೊಂದೆಡೆ ಮಸೀದಿಯ ನಿರ್ಮಾಣ  ಪ್ರಸ್ತಾಪಗಳನ್ನು ವಕ್ಫ್ ಬೋರ್ಡ್ ಸುಪ್ರೀಂ ಮುಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News