ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನೆ

Update: 2019-10-16 14:20 GMT

ಕುಂದಾಪುರ, ಅ.16: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೋಡಿ ಹಾಜಿ ಕೆ.ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಹಮ್ಮಿ ಕೊಳ್ಳಲಾದ ಎರಡು ದಿನಗಳ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟ ‘ಸೌಹಾರ್ದ-2019’ಕ್ಕೆ ಇಂದು ಚಾಲನೆ ನೀಡಲಾಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಅಬೂಬಕ್ಕರ್ ಸಿದ್ದಿಕ್ ಬ್ಯಾರಿ ಮಾತನಾಡಿ, ಕ್ರೀಡಾಕೂಟದಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಗೆಲವು ಕೆಲವು ಮಂದಿಗೆ ಮಾತ್ರ ಸಿಗುತ್ತದೆ. ಆದರೆ ನಮ್ಮ ಪ್ರಯತ್ನವನ್ನು ಎಂದಿಗೂ ಕೈ ಬಿಡಬಾರದು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿರು.

ಧ್ವಜಾರೋಹಣ ನೆರವೇರಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಾರುತಿ ಮಾತನಾಡಿ, ಯುವಜನತೆ ಮಾನಸಿಕವಾಗಿ ದೈಹಿಕರಾಗಿ ಸಬಲರಾದಾಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ವಾಗುತ್ತದೆ. ಸ್ಪರ್ಧೆಯಲ್ಲಿನ ಸೋಲು ಗೆಲುವುವನ್ನು ಸಹಜವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹಿಮಾನ್ ಬ್ಯಾರಿ ವಹಿಸಿದ್ದರು. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಾಧವ ಭಟ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಕಮಲ, ಲಕ್ಷ್ಮೀ, ಅಶ್ಪಾಕ್, ಸಂಸ್ಥೆಯ ನಿರ್ದೇಶಕ ಪ್ರೊ.ದೋಮ ಚಂದ್ರಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಎ., ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಇಲಿಯಾಸ್, ವೀಣಾ ಆಗೇರ, ಬ್ಯಾರೀಸ್ ಡಿ.ಎಡ್. ಕಾಲೇಜಿನ ಪ್ರಾಂಶು ಪಾಲೆ ಫಿರ್ದೋಸ್, ಅನುದಾನಿತ ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ, ಅಬ್ಬುಶೇಕ್ ಕೋಡಿ, ಅಬ್ದುಲ್ಲಾ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಸಾಧಕಿ ಅಮೃತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ಉಪನ್ಯಾಸಕ ಸಂದೀಪ್ ಸ್ವಾಗತಿಸಿದರು. ಹಾಜಿ ಕೆ. ಮೊಹಿದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಶಮೀರ್ ವಂದಿಸಿದರು. ಉಪನ್ಯಾಸಕ ರಾದ ಸಚಿನ್ ಹಾಗೂ ಮೋನಿಕಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕೋಡಿ ಬ್ಯಾರೀಸ್ ಕಾಲೇಜಿನಿಂದ ಗಾಂಧಿ ಮೈದಾನವರೆಗೆ ಪುರ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News