ಉರ್ದು ಕವಿ ಇಕ್ಬಾಲ್ ರ ಹಾಡನ್ನು ವಿದ್ಯಾರ್ಥಿಗಳಿಂದ ಹಾಡಿಸಿದ್ದಕ್ಕೆ ಮುಖ್ಯೋಪಾಧ್ಯಾಯರ ಅಮಾನತು

Update: 2019-10-16 15:30 GMT
Photo: Indianexpress.com

ಹೊಸದಿಲ್ಲಿ, ಅ.16: 'ಸಾರೇ ಜಹಾನ್ ಸೆ ಅಚ್ಛಾ' ಹಾಡನ್ನು ಬರೆದ ಉರ್ದು ಕವಿ ಮುಹಮ್ಮದ್ ಇಕ್ಬಾಲ್ ಅವರ ಇನ್ನೊಂದು ಉರ್ದು ಕವಿತೆ 'ಲಬ್ ಪೆ ಆತೀ ಹೈ ದುಆ' (ಬಚ್ಛೇ ಕಿ ದುವಾ) ಹಾಡನ್ನು ವಿದ್ಯಾರ್ಥಿಗಳಿಂದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿ ದಿನ ಬೆಳಿಗ್ಗೆ ಹಾಡಿಸುತ್ತಾರೆಂದು ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ಆರೋಪ ಹೊರಿಸಿದ ನಂತರ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ.

ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ವಿದ್ಯಾರ್ಥಿಗಳಿಂದ `ಧಾರ್ಮಿಕ ಪ್ರಾರ್ಥನಾ' ಹಾಡು ಹಾಡಿಸುತ್ತಿದ್ದಾರೆಂಬ ವಿಹಿಂಪ ಕಾರ್ಯಕರ್ತರ ದೂರಿನ ತನಿಖೆ ನಡೆಸಿದ ಬಿಲಾಸ್ಪುರ್ ಕ್ಷೇತ್ರ  ಶಿಕ್ಷಣಾಧಿಕಾರಿ ಉಪೇಂದ್ರ ಕುಮಾರ್ ಈ ಕ್ರಮಕ್ಕೆ ಮುಂದಾಗಿದ್ದಾರೆಂದು ವರದಿಯಾಗಿದೆ.

ಈ ಹಾಡನ್ನು ಮುಸ್ಲಿಂ ಕವಿಯೊಬ್ಬರು ಬರೆದಿದ್ದಾರೆ ಹಾಗೂ ಅದರಲ್ಲಿ ಉರ್ದು ಪದ 'ದುಆ', `ರಬ್' `ಅಲ್ಲಾಹ್' ಪದಗಳು ಇದೆಯೆಂಬ ಕಾರಣಕ್ಕೆ ದೂರು ನೀಡಲಾಗಿತ್ತು.

ಮುಖ್ಯೋಪಾಧ್ಯಾಯರು ರಾಷ್ಟ್ರಗೀತೆಯನ್ನು ಬೆಳಗ್ಗೆ ವಿದ್ಯಾರ್ಥಿಗಳಿಂದ ಹಾಡಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ವಜಾಗೊಂಡಿದ್ದಾರೆಂದು ಪಿಲ್ಹಿಬಿಟ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರೆ, ಇದನ್ನು ಬಿಇಒ ಹಾಗೂ ಬಿಲಾಸ್ಪುರ್ ಶಿಕ್ಷಾ ಅಧಿಕಾರಿ ನಿರಾಕರಿಸುತ್ತಾರೆ. ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿತ್ತು. ಆದರೆ ಮದ್ರಸಾಗಳಲ್ಲಿ ಹಾಡುವ ಹಾಡನ್ನು ಇಲ್ಲಿ ಹಾಡಲಾಗಿದೆ ಎಂಬುದೇ ದೂರಾಗಿತ್ತು ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News