ಭೈರಂಪಳ್ಳಿ ರಸ್ತೆ ಕುಸಿತ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ

Update: 2019-10-16 14:47 GMT

ಹಿರಿಯಡ್ಕ, ಅ.15: ದಿಢೀರ್ ಸುರಿದ ಭಾರೀ ಮಳೆಗೆ ಕೊಚ್ಚಿ ಹೋದ ಭೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಪದಕಟ್ಟೆ ಕಂಚಿಗುಂಡಿಯ ಲೋಕೋಪಯೋಗಿ ರಸ್ತೆಯನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಜೊತೆ ಆಗಮಿಸಿದ ಜಿಲ್ಲಾಧಿಕಾರಿ ಮಳೆಯಿಂದ ಕುಸಿದ ರಸ್ತೆಯನ್ನು ವೀಕ್ಷಿಸಿದರು. ಸದ್ಯ ತಾತ್ಕಾಲಿಕ ವಾಗಿ ಮೋರಿ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂದೆ ಈ ಪ್ರದೇಶದಲ್ಲಿ ಸೇತುವೆ ನಿರ್ಮಿಸುವ ಕುರಿತು ಸರಕಾರಕ್ಕೆ ಪ್ರಾಸ್ತಾ ವನೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಬಳಿಕ ಅವರು ಇದೇ ಪರಿಸರದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಗದ್ದೆ ಹಾಗೂ ಕಟಾವು ಮಾಡಲಾದ ಭತ್ತದ ಕೃಷಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ಸದಾಶಿವ ಪೂಜಾರಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ನಾಯ್ಕಿ, ಗ್ರಾಮ ಲೆಕ್ಕಿಗ ಅಭಿೇಕ್ ಮೊದಲಾದವರು ಹಾಜರಿದ್ದರು.

ಸದ್ಯ ಹರಿಖಂಡಿಗೆ -ಪೆರ್ಡೂರು ರಸ್ತೆಯ ಸಂಚಾರವನ್ನು ಸ್ಥಗಿತಗೊಳಿಸ ಲಾಗಿದ್ದು, ರಸ್ತೆ ಕುಸಿದ ಪ್ರದೇಶದಲ್ಲಿ ಬ್ಯಾರಿಕೇಡ್ ಆಳವಡಿಸಿ ಎಚ್ಚರಿಕೆ ವಹಿಸ ಲಾಗಿದೆ. ಈಗ ಹರಿಖಂಡಿಗೆ, ದೊಂಡರಂಗಡಿ, ಅಜೆಕಾರು ಗ್ರಾಮದವರು ಐದು ಕಿ.ಮೀ. ದೂರದ ಕುಂಟಾಲಕಟ್ಟೆ ಮಾಗವಾರ್ಗಿ ಪೆರ್ಡೂರಿಗೆ ಹೋಗುತ್ತಿದ್ದಾರೆ.

ಕಾರ್ಕಳದಲ್ಲಿ ಬೆಳೆ ಹಾನಿ: ಮಂಗಳವಾರ ಅಪರಾಹ್ನ ಸುರಿದ ಹಠಾತ್ ಮಳೆಗೆ ಕಾರ್ಕಳದಲ್ಲೂ ಬೆಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಬೆಳ್ಳಾರೆಯ ಶೇಖರ ಕುಲಾಲ ಎಂಬವರ ಭತ್ತದ ಗದ್ದೆಗೆ ಹಾಗೂ ಕುಕ್ಕುಜೆಯ ಹರೀಶ್ ಪೂಜಾರಿ ಅವರ ಭತ್ತದ ಗದ್ದೆಗೆ ನಿನ್ನೆಮಳೆಯಿಂದ ಹಾನಿಯಾಗಿದ್ದು, ತಲಾ 10,000ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಅಲ್ಲದೇ ನಿನ್ನೆ ಸಿಡಿಲು ಬಡಿದು ತಾಲೂಕಿನ ಕಲ್ಯಾ ಗ್ರಾಮದ ಪುಷ್ಪಾ ನಾಯಕ್ ಹಾಗೂ ಮುಲ್ಲಡ್ಕದ ಕೃಷ್ಣ ಸಫಲಿಗ ಎಂಬವರ ಮನೆಗೆ ಹಾನಿ ಸಂಭವಿಸಿದೆ. ಅಲ್ಲದೇ ಮಳೆಯಿಂದ ದುರ್ಗಾ ಗ್ರಾಮದ ಅಣ್ಣಿ ಮೇರ ಹಾಗೂ ಜೀನತ್ ಬಾನು ಎಂಬವರ ಮನೆಗಳಿಗೂ ಭಾಗಶ: ಹಾನಿಯಾಗಿ ರುವುದಾಗಿ ವರದಿಗಳು ಬಂದಿವೆ.

ಬೈಂದೂರು ತಾಲೂಕು: ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಸುಬ್ಬ ಕುಲಾರ್ತಿ ಎಂಬವರ ಮನೆಗೆ ಸಿಡಿಲು ಬಡಿದು 50,000ರೂ. ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ಗ್ರಾಮದ ವಿಷ್ಣು ಆಚಾರಿ ಹಾಗೂ ಉಪ್ಪುಂದ ಗ್ರಾಮದ ಮುಕಾಂಬು ಶೆಡ್ತಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು ತಲಾ 30ಸಾವಿರ ರೂ.ನಷ್ಟವಾಗಿದೆ. ಹಳ್ಳಿಹೊಳೆಗೆ ಗ್ರಾಮದ ಮುಕಾಂಬು ಎಂಬವರ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು 30ಸಾವಿರ ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News