ಅ.20ರಿಂದ ದ.ಕ.ಜಿಲ್ಲಾದ್ಯಂತ ‘ಗಾಂಧಿ’ ಕಾರ್ಯಕ್ರಮ

Update: 2019-10-16 14:55 GMT

ಮಂಗಳೂರು, ಅ.16: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೆ ಜನ್ಮ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಅ.20ರಿಂದ ನ.21ರೊಳಗೆ ‘ಗಾಂಧಿ’ ಕುರಿತ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರೂ ಆಗಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಹಾತ್ಮಾ ಗಾಂಧೀಜಿಯ ತತ್ವ, ಆದರ್ಶ, ಚಿಂತನೆಯನ್ನು ಮುಂದಿನ ಪೀಳಿಗೆಗೆ ನೀಡಬೇಕು ಮತ್ತು ಸಮಾಜದಲ್ಲಿ ಗಾಂಧಿಯ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನ ನಡೆಯಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿರ್ದೇಶನದಂತೆ ಗಾಂಧಿಯ 150ನೆ ಜನ್ಮದಿನಾಚರಣೆಯ ಅಂಗವಾಗಿ ದೇಶಾದ್ಯಂತ ಗಾಂಧಿಯ ಜನ್ಮದಿನದಿಂದ ಹಿಡಿದು ಪುಣ್ಯತಿಥಿಯವರೆಗೆ ಕಾರ್ಯಕ್ರಮ ನಡೆಯಲಿದೆ.

ದ.ಕ.ಜಿಲ್ಲೆಯಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿಯ 7 ಶಾಸಕರ ನೇತೃತ್ವದಲ್ಲಿ ಅ.20ರಿಂದ ನ.21ರೊಳಗೆ ಪಾದಯಾತ್ರೆ ಆಯೋಜಿಸಲಾಗಿದೆ. 8 ವಿಧಾನ ಸಭಾ ಕ್ಷೇತ್ರ ಮತ್ತು ಬಿಜೆಪಿಯ 9 ಮಂಡಲಗಳು ಹಾಗೂ ಜಿಲ್ಲೆಯ 422 ಗ್ರಾಮಗಳು, 232 ಗ್ರಾಪಂಗಳು, 8 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಯಲಿದೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 150 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಒಟ್ಟಾರೆ 1 ತಿಂಗಳಲ್ಲಿ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 1,200 ಕಿ.ಮೀ.ಪಾದಯಾತ್ರೆ ಆಯೋಜಿಸಲಾಗಿದೆ ಎಂದರು.

ಇದು ರಾಜಕೀಯ ರಹಿತ ಪಾದಯಾತ್ರೆಯಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳಲಾಗುವುದು. ಅ.20ರಂದು ಬೆಳಗ್ಗೆ 8:30ಕ್ಕೆ ನಗರದ ಪುರಭವನ ಎದುರಿನ ಗಾಂಧಿ ಪ್ರತಿಮೆಯಿಂದ ಕರಾವಳಿ ಮೈದಾನಕ್ಕೆ ಪಾದಯಾತ್ರೆ ಮಾಡುವ ಮೂಲಕ ಜಿಲ್ಲಾ ಮಟ್ಟದ ಪಾದಯಾತ್ರೆಗೆ ಚಾಲನ ನೀಡಲಾಗುವುದು ಎಂದು ಸಂಜೀವ ಮಠಂದೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪಕ್ಷದ ಮುಖಂಡರಾದ ಸುದರ್ಶನ್, ಸಂಜಯ ಪ್ರಭು, ಸತೀಶ್ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News