ನ.17ರಿಂದ ಯಕ್ಷಾಂಗಣ ತಾಳಮದ್ದಳೆ ಸಪ್ತಾಹ

Update: 2019-10-16 14:59 GMT

ಮಂಗಳೂರು, ಅ.16: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ 7ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ವು 2019ರ ನವಂಬರ್ 17ರಿಂದ 23ರವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರುಗಲಿದೆ. ಇದರ ಅಂಗವಾಗಿ ‘ಸಂಧಾನ ಸಪ್ತಕ’ ಸರಣಿ ತಾಳಮದ್ದಳೆ ಕೂಟ ಗಳನ್ನು ನಡೆಸಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲಿನಲ್ಲಿ ಮಂಗಳವಾರ ನಡೆದ ಯಕ್ಷಾಂಗಣ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ನವಂಬರ್ 17ರಂದು ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಳಮದ್ದಳೆ ಸಪ್ತಾಹದಲ್ಲಿ ಪ್ರತಿದಿನ ಕ್ರಮವಾಗಿ ಸುಗ್ರೀವ ಸಂಧಾನ, ದಕ್ಷಿಣಾಂಕ ಸಂಧಾನ, ಅಂಗದ ಸಂಧಾನ, ಮಾರುತಿ ಸಂಧಾನ, ಸುಭದ್ರಾ ಸಂಧಾನ,ಸಿರಿ ಕಿಟ್ಣ ಸಂಧಾನ ( ತುಳು ) ಮತ್ತು ಷಣ್ಮುಖ ಸಂಧಾನಗಳೆಂಬ ಏಳು ಪ್ರಸಂಗಗಳನ್ನು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಸಲಾಗುವುದು ಎಂದರು.

ಈ ಸಂದರ್ಭ ಕೀರ್ತಿಶೇಷ ಕಲಾವಿದರ ಸರಣಿ ಸಂಸ್ಮರಣೆಯೂ ಜರುಗಲಿದೆ. ಅಲ್ಲದೆ ಹಿರಿಯ ಸಾಧಕರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ಯಕ್ಷಾಂಗಣ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಭಾಸ್ಕರ ರೈ ಕುಕ್ಕುವಳ್ಳಿ ವಿವರಿಸಿದರು.

ಸಭೆಯಲ್ಲಿ ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕೋಶಾಧಿಕಾರಿ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಉಮೇಶ ಆಚಾರ್ಯ ಗೇರುಕಟ್ಟೆ, ವಿ.ಬಿ.ಮೈಂದನ್, ಪಿ.ಡಿ.ಶೆಟ್ಟಿ, ನಿರ್ಮಲ್ ಭಟ್, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News