ಭಾರತದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಬಹಳ ಕಡಿಮೆಯಿದೆ: ಐಎಂಎಫ್ ಎಂ.ಡಿ

Update: 2019-10-16 15:07 GMT

ವಾಶಿಂಗ್ಟನ್, ಅ.16: ಭಾರತದಲ್ಲಿ ಉದ್ಯೋಗಕ್ಷೇತ್ರದಲ್ಲಿ ಮಹಿಳೆಯ ಸಂಖ್ಯೆ ಬಹಳ ಕಡಿಮೆಯಿದೆ. ಉದ್ಯೋಗದ ಸ್ಥಳದಲ್ಲಿ ಅಭದ್ರತೆಯ ಅನುಭವ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ವ್ಯವಸ್ಥಾಪನಾ ನಿರ್ದೇಶಕಿ ಕ್ರಿಸ್ಟಲಿನಾ ಜೋರ್ಜಿವ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಮಹಿಳೆ, ಉದ್ಯೋಗ ಮತ್ತು ನಾಯಕತ್ವ: ಮುಖಾಮುಖಿ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜೋರ್ಜಿವ, ಮಹಿಳೆಯರು ಶಾಲೆ ಅಥವಾ ಕೆಲಸಕ್ಕೆ ಹೋಗುವುದು ಅಷ್ಟು ಸುರಕ್ಷಿತವಲ್ಲ ಎಂದು ಭಾವಿಸುತ್ತಾರೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಮಹಿಳೆಯರು ಕಾರ್ಮಿಕ ಕ್ಷೇತ್ರದಲ್ಲಿ ಭಾಗವಹಿಸುವುದು ಬಹಳ ಕಡಿಮೆ. ಅದಕ್ಕೆ ಹಲವು ಕಾರಣಗಳಿವೆ ಅವುಗಳಲ್ಲಿ ಒಂದು ಅಭದ್ರತೆ. ಇದು ಸರಿಪಡಿಸಬಲ್ಲಂತಹ ಸಮಸ್ಯೆ. ಅದನ್ನು ನಿವಾರಿಸಲು ಬದ್ಧತೆಯ ಅಗತ್ಯವಿದೆ ಎಂದು ಅಮೆರಿಕದ ವಾಶಿಂಗ್ಟನ್ ಡಿಸಿಯಲ್ಲಿರುವ ಐಎಂಎಫ್‌ನ ಮುಖ್ಯಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಜೋರ್ಜಿವ ತಿಳಿಸಿದ್ದಾರೆ. ಭಾರತದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ 2005ರಲ್ಲಿ ಶೇ.36.7ರಷ್ಟಿದ್ದ ಮಹಿಳೆಯರ ಸಹಭಾಗಿತ್ವ 2018ರ ವೇಳೆ ಶೇ. 26ಕ್ಕೆ ಕುಸಿದಿದೆ. ಇದಕ್ಕೆ ಪ್ರಮುಖ ಕಾರಣ ಗುಣಮಟ್ಟದ ಶಿಕ್ಷಣದ ಕೊರತೆ ಮತ್ತು ಮಹಿಳೆಯರ ಅವಕಾಶಗಳಿಗೆ ಮಿತಿ ಹೇರುವ ಸಾಮಾಜಿಕ, ಆರ್ಥಿಕ ತಡೆಗಳು ಎಂದು ದೆಲೊಯಿಟ್ ಕಳೆದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ನಾಲ್ಕನೇ ಕೈಗಾರಿಕ ಕ್ರಾಂತಿಗಾಗಿ ಭಾರತದ ಮಹಿಳೆಯರು ಮತ್ತು ಹೆಣ್ಮಕ್ಕಳ ಸಬಲೀಕರಣ ಹೆಸರಿನ ವರದಿಯ ಪ್ರಕಾರ, ಶೇ.95 ಅಥವಾ 19.5 ಕೋಟಿ ಮಹಿಳೆಯರು ಅಸಂಘಟಿತ ವಲಯ ಅಥವಾ ವೇತನಪಾವತಿಸಲಾಗದ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News