‘ಹಸಿವು ಮುಕ್ತ ವಿಶ್ವ’ ಜಾಗೃತಿಗಾಗಿ ಸೈಕಲ್ ರ್ಯಾಲಿ

Update: 2019-10-16 16:04 GMT

ಮಣಿಪಾಲ, ಅ.16: ವಿಶ್ವ ಆಹಾರ ದಿನದ ಅಂಗವಾಗಿ ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್‌ನ ವಿದ್ಯಾರ್ಥಿಗಳು ಇಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕ್ಯಾಂಪಸ್‌ನೊಳಗೆ ‘ಹಸಿವು ಮುಕ್ತ ವಿಶ್ವ’ದ ಅರಿವಿಗಾಗಿ ಸೈಕಲ್ ಜಾಥವನ್ನು ಆಯೋಜಿಸಿದ್ದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಅವರು ವಿವಿ ಬಿಲ್ಡಿಂಗ್ ಎದುರು ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು. ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಮಾಹೆ ಕ್ಯಾಂಪಸ್ ಉದ್ದಕ್ಕೂ ತೆರಳಿ ಈ ಬಾರಿಯ ಘೋಷ ವಾಕ್ಯವಾದ ‘ಹಸಿವು ಮುಕ್ತ ವಿಶ್ವಕ್ಕಾಗಿ ಆರೋಗ್ಯಪೂರ್ಣ ಆಹಾರ’ದ ಕುರಿತು ಜಾಗೃತಿ ಮೂಡಿಸಿದರು.

ಇದರೊಂದಿಗೆ ಭಾರತದ ಆಹಾರ ಭದ್ರತೆ ಹಾಗೂ ಗುಣಮಟ್ಟ ನಿಗಮವು ಹಮ್ಮಿಕೊಂಡ ‘ಸಮರ್ಪಕ ಆಹಾರ ಸೇವನೆ ಚಳವಳಿ’ಯ ಕುರಿತಂತೆಯೂ ವಿದ್ಯಾರ್ಥಿಗಳು ಮಣಿಪಾಲದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನದಲ್ಲಿ ಭಾಗಿಯಾದರು.

 ಸೈಕಲ್ ರ್ಯಾಲಿಯಲ್ಲಿ ವಾಗ್ಷಾದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ರ್ಯಾಲಿಗೆ ಹಸಿರು ನಿಶಾನೆ ತೋರಿಸಿದ ಮಾತನಾಡಿದ ಡಾ.ಪೂರ್ಣಿಮಾ ಬಾಳಿಗಾ, ತೂಕ ಇಳಿಸುವ ಭರದಲ್ಲಿ ಮಕ್ಕಳು ಇಂದು ಆಹಾರಗಳನ್ನು ತಪ್ಪಾಗಿ ಸೇವಿಸುತಿದ್ದಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಅರಿವು ಇರುವುದಿಲ್ಲ. ಒಳ್ಳೆಯ ವ್ಯಾಯಾಮದಿಂದ ಸಮತೋಲನವನ್ನು ಕಾಪಾಡಲು ಸಾಧ್ಯವಿದೆ ಎಂದರು.

ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಾಗಿ ಅಪೌಷ್ಠಿಕತೆ ಕಂಡುಬರುತ್ತದೆ. ಶಾಲಾ ಮಕ್ಕಳಿಗೂ ಸರಿಯಾದ ಪೌಷ್ಠಿಕ ಆಹಾರದ ಅಗತ್ಯವಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಸಮತೋಲಿತ ಆಹಾರವನ್ನು ಸೇವಿಸುವುದು ಮಾತ್ರವಲ್ಲದೇ ವ್ಯಾಯಾಮವನ್ನು ಮಾಡುವ ಅಗತ್ಯವಿದೆ ಎಂದು ವಾಗ್ಷಾದ ಪ್ರಾಂಶುಪಾಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News