ಸಂಸದರಿಗೆ ಸಂಸ್ಕೃತ ತರಗತಿ: ಆರೆಸ್ಸೆಸ್ ಅಂಗಸಂಸ್ಥೆಯ ಯೋಜನೆ

Update: 2019-10-16 16:22 GMT

 ಹೊಸದಿಲ್ಲಿ, ಅ. 16: ಚಳಿಗಾಲದ ಅಧಿವೇಶನದ ಸಂದರ್ಭ ಸಂಸದರಿಗೆ ಸಂಸ್ಕೃತ ಕಲಿಸುವ ಹೊಸ ಯೋಜನೆಯೊಂದನ್ನು ಆರೆಸ್ಸೆಸ್‌ನ ಅಂಗಸಂಸ್ಥೆ ಸಂಸ್ಕೃತ ಭಾರತಿ ರೂಪಿಸಿದೆ.

 ಭಾಷೆ ಕಲಿಕೆ ಉತ್ತೇಜಿಸುವ ಪ್ರಯತ್ನವಾಗಿ ಸಂಸ್ಕೃತ ಭಾರತಿ ಹೊಸದಿಲ್ಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭ ಸಂಸದರಿಗೆ 15 ದಿನಗಳ ಸಂಸ್ಕೃತ ಕಲಿಕಾ ಶಿಬಿರ ಆಯೋಜಿಸಲಿದೆ.

ಶಿಬಿರ ಆಯೋಜಿಸಲು ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರ ಅನುಮತಿ ಪಡೆಯಲಾಗುವುದು ಎಂದು ಸಂಘಟನೆ ತಿಳಿಸಿದೆ.

‘‘ನಾವು ಸ್ಪೀಕರ್ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಸಂಸದರಿಗೆ ಪ್ರತಿದಿನ ಒಂದು ಗಂಟೆಗಳ ತರಬೇತಿ ಕಾರ್ಯಕ್ರಮ ನಡೆಸಲು ಅವರು ಸಲಹೆ ನೀಡಿದ್ದಾರೆ. ಕಾರ್ಯ ವಿಧಾನಗಳನ್ನು ರೂಪಿಸಲು ನಾವು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ’’ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಚಾಲಕ ದಿನೇಶ್ ಕಾಮತ್ ಹೇಳಿದ್ದಾರೆ.

ದಿನಗಳ ಸಂಖ್ಯೆ ವಿಸ್ತರಿಸಬಹುದು. ಆದರೆ, ಮೊದಲ ಬ್ಯಾಚ್‌ನಲ್ಲಿ 30ರಿಂದ 40 ಸಂಸದರು ಸಂಸ್ಕೃತ ಕಲಿಯಬೇಕೆಂದು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಾಚೀನ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಸಂಸದರು ದಿನನಿತ್ಯ ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಲು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಸಂಸದರಿಗೆ ಸಂಸ್ಕೃತ ಭಾರತಿ ಅಧ್ಯಾಪಕರು ತರಬೇತಿ ನೀಡಲಿದ್ದಾರೆ. ಭಾಷೆ ಕಲಿಯಲು ಸಂಸದರಿಗೆ ನೆರವು ನೀಡಲು ಎರಡು ಕೈಪಿಡಿಗಳನ್ನು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News