ಕಾಶ್ಮೀರ ಆ್ಯಪಲ್ ಮೇಲೆ ‘ಅಝಾದಿ’, ‘ಬುರ್ಹಾನ್ ವಾನಿ’ ಬರವಣಿಗೆ

Update: 2019-10-16 16:45 GMT

 ಜಮ್ಮು, ಅ. 16: ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ಹಣ್ಣು ಮಾರಾಟಗಾರರು ತಂದ ಆ್ಯಪಲ್ ಪೆಟ್ಟಿಗೆಗಳಲ್ಲಿ ‘ವಿ ವಾಂಟ್ ಫ್ರೀಡಂ’, ‘ಐ ಲವ್ ಬುರ್ಹಾನ್ ವಾನಿ’ ಹಾಗೂ ‘ಝಾಕಿರ್ ಮೂಸಾ ಕಮ್ ಬ್ಯಾಕ್’ ಎಂದು ಬರೆದ ಆ್ಯಪಲ್‌ಗಳು ಕಂಡು ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಂತಹ ಸಂದೇಶಗಳನ್ನು ಬರೆದ ಆ್ಯಪಲ್‌ಗಳನ್ನು ಖರೀದಿಸಲು ಜನರು ನಿರಾಕರಿಸುತ್ತಿರುವುದರಿಂದ ಸರಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ಕಾಶ್ಮೀರ ಆ್ಯಪಲ್‌ಗಳನ್ನು ಬಹಿಷ್ಕರಿಸಲಾಗುವುದು ಎಂದು ಹಣ್ಣು ಮಾರಾಟಗಾರರು ಬುಧವಾರ ಬೆದರಿಕೆ ಒಡ್ಡಿದ್ದಾರೆ.

 ಸಗಟು ಮಾರುಕಟ್ಟೆಯಿಂದ ಖರೀದಿಸಿದ ಆ್ಯಪಲ್ ಬಾಕ್ಸ್‌ಗಳನ್ನು ತೆರೆದಾಗ ಅದರಲ್ಲಿ ಕಪ್ಪು ಮಾರ್ಕರ್ ಪೆನ್‌ನಲ್ಲಿ ಸಂದೇಶಗಳನ್ನು ಬರೆದ ಆ್ಯಪಲ್‌ಗಳನ್ನು ಹಣ್ಣು ಮಾರಾಟಗಾರರು ಪತ್ತೆ ಮಾಡಿದ್ದರು.

 ಈ ಹಿನ್ನೆಲೆಯಲ್ಲಿ ಕಥುವಾ ಸಗಟು ಮಾರುಕಟ್ಟೆ ಅಧ್ಯಕ್ಷ ರೋಹಿತ್ ಗುಪ್ತಾ ನೇತೃತ್ವದಲ್ಲಿ ಹಣ್ಣು ಮಾರಾಟಗಾರರು ಇಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನ ವಿರೋಧಿ ಹಾಗೂ ಭಯೋತ್ಪಾದನ ವಿರೋಧಿ ಘೋಷಣೆಗಳನ್ನು ಕೂಗಿದರು.

ಆ್ಯಪಲ್ ಬಾಕ್ಸ್‌ಗಳು ಕಾಶ್ಮೀರದಿಂದ ಬಂದಿವೆ. ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಸಂದೇಶ ಬರೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ಇದರ ಹಿಂದಿರುವ ಶಕ್ತಿಯ ವಿರುದ್ಧ ಆಡಳಿತ ಹಾಗೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲ ಹಣ್ಣು ಮಾರಾಟಗಾರರನ್ನು ಸಂಪರ್ಕಿಸಿದ್ದಾರೆ. ‘‘ನಾವು ತನಿಖೆ ಆರಂಭಿಸಿದ್ದೇವೆ’’ ಎಂದು ಉಪ ಪೊಲೀಸ್ ಅಧೀಕ್ಷಕ ಮಜೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News