ನಟ ಮೋಹನ್ ಲಾಲ್‌ಗೆ ಕೇರಳ ಹೈಕೋರ್ಟ್ ನೋಟಿಸ್

Update: 2019-10-16 16:46 GMT

 ಹೊಸದಿಲ್ಲಿ, ಅ. 16: ನಾಲ್ಕು ಆನೆ ದಂತಗಳನ್ನು ಹೊಂದಲು ಅನುಮತಿ ನೀಡಿ 2012ರಲ್ಲಿ ಸರಕಾರ ನೀಡಿದ ಪ್ರಮಾಣ ಪತ್ರ ರದ್ದುಗೊಳಿಸಲು ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ನಟ ಮೋಹನ್ ಲಾಲ್‌ಗೆ ಕೇರಳ ಹೈಕೋರ್ಟ್ ನೋಟಿಸು ಜಾರಿ ಮಾಡಿದೆ.

ಕೇರಳದ ಕೊಚ್ಚಿಯ ಉದಕಮಂಡಲದ ನಿವಾಸಿ ಎ.ಎ. ಪೌಲೋಸ್ ಕಳೆದ ಎಪ್ರಿಲ್‌ನಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

ಕೊಚ್ಚಿಯಲ್ಲಿರುವ ಮೋಹನ್ ಲಾಲ್ ಮನೆ ಮೇಲೆ 2012 ಜೂನ್‌ನಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ನಾಲ್ಕು ಆನೆದಂತಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಮೋಹನ್ ಲಾಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.

 ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಲಂ 42ರ ಪ್ರಕಾರ ಆನೆ ದಂತಗಳನ್ನು ವಶದಲ್ಲಿ ಇರಿಸಿಕೊಳ್ಳಲು ಮೋಹನ್‌ ಲಾಲ್ ಅರಣ್ಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗಿತ್ತು. ದಾಳಿ ಸಂದರ್ಭ ಮೋಹನ್ ಲಾಲ್ ಅವರಲ್ಲಿ ಪ್ರಮಾಣ ಪತ್ರ ಇರಲಿಲ್ಲ ಎಂದು ದೂರುದಾರರು ಆರೋಪಿಸಿದ್ದರು.

 ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಸೆಪ್ಟಂಬರ್‌ನಲ್ಲಿ ಅರಣ್ಯ ಇಲಾಖೆ ಮೋಹನ್ ಲಾಲ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಲಾಲ್ ಅಕ್ಟೋಬರ್ 14ರಂದು ಹೈಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿದ್ದರು. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ಆದರೆ, ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮಣಿಕುಮಾರ್ ನಟ ಮೋಹನ್ ಲಾಲ್‌ಗೆ ನೋಟಿಸು ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News