ಹಾಂಕಾಂಗ್ ಪ್ರತಿಭಟನಕಾರರ ಪರ ಅಮೆರಿಕ ಸಂಸತ್ತು ನಿರ್ಣಯ

Update: 2019-10-16 17:24 GMT

ವಾಶಿಂಗ್ಟನ್, ಅ. 16: ಹಾಂಕಾಂಗ್‌ನ ಪ್ರಜಾಪ್ರಭುತ್ವಪರ ಪ್ರತಿಭಟನಕಾರರು ಕೋರಿರುವಂತೆ, ಹಾಂಕಾಂಗ್‌ನ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಮಸೂದೆಯೊಂದನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಅಂಗೀಕರಿಸಿದೆ.

‘ಹಾಂಕಾಂಗ್ ಹ್ಯೂಮನ್ ರೈಟ್ಸ್ ಆ್ಯಂಡ್ ಡೆಮಾಕ್ರಸಿ ಆ್ಯಕ್ಟ್’ ನಿರ್ಣಯವನ್ನು ಇನ್ನು ಸೆನೆಟ್‌ನಲ್ಲಿ ಮಂಡಿಸಲಾಗುವುದು. ಬಳಿಕ ಅದು ಕಾಯ್ದೆಯಾಗುತ್ತದೆ. ಈ ನಿರ್ಣಯಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಉಭಯ ಪಕ್ಷಗಳ ಸಂಸದರೂ ಬೆಂಬಲ ನೀಡಿದ್ದಾರೆ.

ಹಾಂಕಾಂಗ್ ಮಾನವಹಕ್ಕುಗಳು ಮತ್ತು ಕಾನೂನಿನ ಆಡಳಿತವನ್ನು ಗೌರವಿಸುತ್ತದೆ ಎಂಬುದಾಗಿ ಪ್ರತಿ ವರ್ಷ ಅಮೆರಿಕ ವಿದೇಶಾಂಗ ಇಲಾಖೆಯು ಪ್ರಮಾಣಪತ್ರ ನೀಡದಿದ್ದರೆ, ಹಾಂಕಾಂಗ್-ಅಮೆರಿಕ ವಿಶೇಷ ವ್ಯಾಪಾರ ಸ್ಥಾನಮಾನವನ್ನು ಈ ಕಾನೂನು ಕೊನೆಗೊಳಿಸುತ್ತದೆ.

ಅದೂ ಅಲ್ಲದೆ, ಹಾಂಕಾಂಗ್‌ನ ಸ್ವಾಯತ್ತೆಯ ನಿರ್ಮೂಲನೆಗೆ ಹಾಗೂ ತೀವ್ರ ಮಾನಹಕ್ಕು ಉಲ್ಲಂಘನೆಗಳಿಗೆ ಕಾರಣರಾದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ದಿಗ್ಬಂಧನ ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ಕಾನೂನು ಅಧಿಕಾರ ನೀಡುತ್ತದೆ.

ಚೀನಾದಿಂದ ಆಕ್ರೋಶ

ಹಾಂಕಾಂಗ್ ಕುರಿತು ಅಮೆರಿಕದ ಸಂಸತ್ತು ಅಂಗೀಕರಿಸಿರುವ ನಿರ್ಣಯದ ವಿರುದ್ಧ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘‘ಹಾಂಕಾಂಗ್ ಎದುರಿಸುತ್ತಿರುವುದು ತಥಾಕಥಿತ ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವ ವಿಷಯ ಅಲ್ಲವೇ ಅಲ್ಲ. ಬದಲಿಗೆ, ಹಿಂಸೆಯನ್ನು ನಿಲ್ಲಿಸುವ, ವ್ಯವಸ್ಥೆಯನ್ನು ಮರುಸ್ಥಾಪಿಸುವ ಹಾಗೂ ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ಕಾರ್ಯ ಅಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಆಗಬೇಕಾಗಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಬೇಕು ಎಂಬುದಾಗಿಯೂ ಗೆಂಗ್ ಹೇಳಿದ್ದಾರೆ ಹಾಗೂ ಪ್ರಸ್ತಾಪಿತ ಹಾಂಕಾಂಗ್ ಮಸೂದೆಯನ್ನು ವಿರೋಧಿಸಲು ಚೀನಾ ‘ಕಠಿಣ ಕ್ರಮಗಳನ್ನು’ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News