ಉತ್ತರ ಸಿರಿಯದಲ್ಲಿ ಟರ್ಕಿಯಿಂದ ದಾಳಿ: ಕನಿಷ್ಠ 70 ನಾಗರಿಕರು ಮೃತ

Update: 2019-10-16 17:57 GMT

ದುಬೈ, ಅ. 16: ಸಿರಿಯದ ಅಲ್-ಹಸ್ಕ ಪ್ರಾಂತದ ಕೆಲವು ಪ್ರದೇಶಗಳಲ್ಲಿ ಟರ್ಕಿ ಮತ್ತು ಅದರ ಮಿತ್ರ ಬಣಗಳು ಮಂಗಳವಾರ ರಾತ್ರಿ ನಡೆಸಿದ ಕ್ಷಿಪಣಿ ದಾಳಿಯೊಂದರಲ್ಲಿ ಕನಿಷ್ಠ 70 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಬುಧವಾರ ತಿಳಿಸಿದೆ.

ಸಿರಿಯನ್ ಕುರ್ದ್‌ಗಳ ವಿರುದ್ಧ ಟರ್ಕಿ ಪಡೆಗಳು ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಿಂದಾಗಿ ಸುಮಾರು 3 ಲಕ್ಷ ನಾಗರಿಕರು ಅಲ್-ಹಸ್ಕ ಪ್ರಾಂತವನ್ನು ತೊರೆದಿದ್ದಾರೆ ಎಂದು ಅದು ಹೇಳಿದೆ.

ವಿದ್ಯುತ್ ಪೂರೈಕೆ ನಿಲುಗಡೆಯಾಗಿದೆ ಹಾಗೂ ಹಲವಾರು ಪಟ್ಟಣಗಳು ಮತ್ತು ಗ್ರಾಮಗಳು ಜನರಿಲ್ಲದೆ ಭಣಗುಡುತ್ತಿವೆ ಎಂದು ವೀಕ್ಷಣಾಲಯ ತಿಳಿಸಿದೆ.

ಉತ್ತರ ಸಿರಿಯದಲ್ಲಿರುವ ಕುರ್ದ್ ಬಂಡುಕೋರರನ್ನು ಗುರಿಯಾಗಿಸಿ ಟರ್ಕಿ ಸೇನೆ ಅಕ್ಟೋಬರ್ 9ರಂದು ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ.

ಹಲವಾರು ದೇಶಗಳು ಟರ್ಕಿಯ ಸೇನಾ ಕಾರ್ಯಾಚರಣೆಯನ್ನು ಖಂಡಿಸಿವೆ ಹಾಗೂ ಟರ್ಕಿಗೆ ಮಾಡಲು ಉದ್ದೇಶಿಸಿರುವ ಶಸ್ತ್ರಾಸ್ತ್ರ ರಫ್ತುಗಳನ್ನು ನಿಲ್ಲಿಸಿವೆ.

ರಶ್ಯಕ್ಕೆ ಭೇಟಿ ನೀಡಲು ಎರ್ದೊಗಾನ್‌ಗೆ ಪುಟಿನ್ ಆಮಂತ್ರಣ

ಉತ್ತರ ಸಿರಿಯದಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷದ ಬಗ್ಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ಮಂಗಳವಾರ ಫೋನ್‌ನಲ್ಲಿ ಮಾತನಾಡಿದ್ದಾರೆ ಹಾಗೂ ಶೀಘ್ರವೇ ರಶ್ಯಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದ್ದಾರೆ ಎಂದು ರಶ್ಯ ಸರಕಾರ ತಿಳಿಸಿದೆ.

‘‘ಮುಂಬರುವ ದಿನಗಳಲ್ಲಿ ಕೆಲಸದ ಮೇಲೆ ರಶ್ಯಕ್ಕೆ ಬರುವಂತೆ ಪುಟಿನ್, ಎರ್ದೊಗಾನ್‌ರನ್ನು ಆಮಂತ್ರಿಸಿದ್ದಾರೆ ಹಾಗೂ ಆಮಂತ್ರಣವನ್ನು ಸ್ವೀಕರಿಸಲಾಗಿದೆ’’ ಎಂದು ಪುಟಿನ್ ಕಚೇರಿ ಮಂಗಳವಾರ ರಾತ್ರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News