311 ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದ ಮೆಕ್ಸಿಕೋ

Update: 2019-10-17 18:07 GMT
ಸಾಂದರ್ಭಿಕ ಚಿತ್ರ

ಮೆಕ್ಸಿಕೊ ಸಿಟಿ, ಅ. 17: ಮೆಕ್ಸಿಕೊದ ವಲಸೆ ಅಧಿಕಾರಿಗಳು ಮೊದಲ ಬಾರಿಗೆ ಓರ್ವ ಮಹಿಳೆ ಸೇರಿದಂತೆ 311 ಭಾರತೀಯರನ್ನು ದೇಶದ ವಿವಿಧ ಭಾಗಗಳಿಂದ ಗಡಿಪಾರು ಮಾಡಿದ್ದಾರೆ. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ, ಜನರು ಅಕ್ರಮವಾಗಿ ತನ್ನ ಗಡಿಗಳನ್ನು ದಾಟಿ ಹೋಗುವುದನ್ನು ತಡೆಯುವ ಕ್ರಮಗಳನ್ನು ಮೆಕ್ಸಿಕೊ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಮೆಕ್ಸಿಕೊದಲ್ಲಿ ಖಾಯಂ ವಾಸ ಮಾಡುವ ಸ್ಥಾನಮಾನ ಹೊಂದಿರದ ಭಾರತೀಯರನ್ನು ಟೊಲುಕ ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್ 747 ವಿಮಾನವೊಂದರಲ್ಲಿ ಹೊಸದಿಲ್ಲಿಗೆ ಗಡಿಪಾರು ಮಾಡಲಾಯಿತು ಎಂದು ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅವರನ್ನು ಓಕ್ಸಾಕ, ಬಾಜ ಕ್ಯಾಲಿಫೋರ್ನಿಯ, ವೆರಾಕ್ರೂಝ್, ಚಿಯಾಪಸ್, ಸೊನೊರ, ಮೆಕ್ಸಿಕೊ ಸಿಟಿ, ಡುರಾಂಗೊ ಮತ್ತು ಟಬಸ್ಕೊ ರಾಜ್ಯಗಳ ವಲಸೆ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು.

ಮೆಕ್ಸಿಕೊದ ಗಡಿಗಳ ಮೂಲಕ ಅಮೆರಿಕ ಪ್ರವೇಶಿಸುವ ವಲಸಿಗರನ್ನು ಮೆಕ್ಸಿಕೊ ತಡೆಯದಿದ್ದರೆ, ಆ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್‌ನಲ್ಲಿ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News