ಬಿಹಾರ ಚುನಾವಣೆಯಲ್ಲಿ ಎನ್‌ಡಿಎಗೆ ನಿತೀಶ್ ನೇತೃತ್ವ: ಅಮಿತ್ ಶಾ

Update: 2019-10-17 17:49 GMT

ಪಾಟ್ನಾ, ಅ.17: ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ನಿತೀಶ್ ಕುಮಾರ್ ನೇತೃತ್ವವಿರುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ. ಈ ಮೂಲಕ ಎನ್‌ಡಿಎ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

 ನಮ್ಮ ಮೈತ್ರಿ ಸ್ಥಿರವಾಗಿದ್ದು ಎನ್‌ಡಿಎ ಬಿಹಾರದಲ್ಲಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಲಿದೆ. ರಾಷ್ಟ್ರಮಟ್ಟದಲ್ಲಿ ಎನ್‌ಡಿಎಯನ್ನು ನರೇಂದ್ರ ಮೋದಿ ಮುನ್ನಡೆಸಲಿದ್ದಾರೆ ಎಂದು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

 ಸಣ್ಣ ಪುಟ್ಟ ಜಗಳವಾಗುವುದು ಆರೋಗ್ಯಯುತ ಮೈತ್ರಿಯ ಸಂಕೇತವಾಗಿದೆ. ಆದರೆ ಭಿನ್ನಾಭಿಪ್ರಾಯವಿದ್ದಾಗ ಮಾನಸಿಕವಾಗಿ ಬಿರುಕು ಮೂಡುತ್ತದೆ ಎಂದು ಹೇಳಲಾಗದು ಎಂದು ಶಾ ಹೇಳಿದ್ದಾರೆ. ಶಾ ಹೇಳಿಕೆಯನ್ನು ಸ್ವಾಗತಿಸಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಚಿವ ಶ್ಯಾಂ ರಜಕ್, ಈ ಪ್ರಮುಖ ನಿರ್ಧಾರ ಕೈಗೊಂಡು ಎರಡೂ ಪಕ್ಷಗಳ ಕಾರ್ಯಕರ್ತರ ಮನದಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ನಿತೀಶ್ ಕುಮಾರ್ ನೇತೃತ್ವವನ್ನು ಬೆಂಬಲಿಸುವ ಮೂಲಕ ಉಭಯ ಪಕ್ಷಗಳ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂದು ಕಾತರದಿಂದ ಕಾಯುತ್ತಿದ್ದ ವಿಪಕ್ಷಗಳ ಮುಖಕ್ಕೆ ಹೊಡೆದಂತಾಗಿದೆ ಎಂದವರು ಹೇಳಿದ್ದಾರೆ. ಪಕ್ಷದ ನಾಯಕರೊಂದಿಗೆ ಮುನಿಸಿಕೊಂಡಿರುವ ಜೆಡಿಯು ಮುಖಂಡ ಅಜಯ್ ಅಲೋಕ್ ಅವರೂ ಈ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಕೇವಲ ನಿತೀಶ್ ಕುಮಾರ್ ಮಾತ್ರ ಬಿಹಾರದಲ್ಲಿ ಎನ್‌ಡಿಎನ್ನು ಇನ್ನಷ್ಟು ಬಲಿಷ್ಟಗೊಳಿಸಬಲ್ಲರು. ಅಮಿತ್ ಶಾ ಹೇಳಿಕೆ ಎನ್‌ಡಿಎಯನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತದೆ ಎಂದವರು ಹೇಳಿದ್ದಾರೆ.

ಶಾ ಹೇಳಿಕೆಯನ್ನು ಹಿರಿಯ ಕೇಂದ್ರ ಸಚಿವ, ಎಲ್‌ಜೆಪಿ ಅಧ್ಯಕ್ಷ ರಾಮ್‌ವಿಲಾಸ್ ಪಾಸ್ವಾನ್ ಕೂಡಾ ಸ್ವಾಗತಿಸಿದ್ದಾರೆ. ಎಲ್‌ಜೆಪಿಯು ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಸದಸ್ಯನಾಗಿದೆ. ಬಿಹಾರದಲ್ಲಿ ಎನ್‌ಡಿಎ ನಾಯಕತ್ವದ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ನಾವು ಹೇಳುತ್ತಲೇ ಇದ್ದೇವೆ ಎಂದು ಪಾಸ್ವಾನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News