ಭಾರತ ಪ್ರಜಾಸತ್ತೆಯನ್ನು ಪ್ರೀತಿಸುವ, ಬಂಡವಾಳಗಾರರನ್ನು ಗೌರವಿಸುವ ದೇಶ

Update: 2019-10-17 18:01 GMT

ವಾಶಿಂಗ್ಟನ್, ಅ. 17: ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಬಂಡವಾಳಗಾರರನ್ನು ಗೌರವಿಸುವ ವಾತಾವರಣವಿದ್ದು, ಹೂಡಿಕೆದಾರರಿಗೆ ಇದಕ್ಕಿಂತ ಒಳ್ಳೆಯ ದೇಶ ಜಗತ್ತಿನಲ್ಲಿ ಬೇರೆ ಇರಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಲ್ಲಿರುವ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಧಾರಣೆಗಳನ್ನು ತರಲು ಸರಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು.

‘‘ಭಾರತ ಇಂದಿಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಪೈಕಿ ಒಂದಾಗಿದೆ. ಅದು ಅತ್ಯಂತ ಕೌಶಲಭರಿತ ಮಾನವಶಕ್ತಿ ಹಾಗೂ ಸುಧಾರಣೆಗಳ ಹೆಸರಿನಲ್ಲಿ ಅಗತ್ಯವಾದುದನ್ನು ನಿರಂತರವಾಗಿ ಮಾಡುವ ಸರಕಾರವನ್ನು ಹೊಂದಿದೆ. ಮೇಲಾಗಿ, ಅಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವಿದೆ’’ ಎಂದು ಅವರು ವಿವರಿಸಿದರು.

ಹೂಡಿಕೆದಾರರು ಭಾರತದಲ್ಲಿ ಯಾಕೆ ಹೂಡಿಕೆ ಮಾಡಬೇಕು ಎಂಬ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತದ ನ್ಯಾಯ ವ್ಯವಸ್ಥೆಯು ಕೊಂಚ ವಿಳಂಬಿತವಾದರೂ ಅಲ್ಲಿ ಪಾರದರ್ಶಕ ಮತ್ತು ಮುಕ್ತ ಸಮಾಜವನ್ನು ಹೊಂದಿದೆ ಎಂದು ಹೇಳಿದರು. ಕಾನೂನಿನ ಆಡಳಿತ ಚಾಲ್ತಿಯಲ್ಲಿದೆ ಹಾಗೂ ಹಲವಾರು ಸುಧಾರಣೆಗಳು ನಡೆಯುತ್ತಿವೆ ಎಂದರು.

ಅಮೆರಿಕ-ಭಾರತ ಸ್ಟ್ರಾಟಜಿಕ್ ಆ್ಯಂಡ್ ಪಾರ್ಟ್‌ನರ್‌ಶಿಪ್ ಫೋರಂನ ಸಹಯೋಗದೊಂದಿಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ (ಎಫ್‌ಐಸಿಸಿಐ) ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News