ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಪಾಕ್ ಬೆವರಿಳಿಸಿದ ತರೂರ್

Update: 2019-10-17 18:14 GMT

ಹೊಸದಿಲ್ಲಿ,ಅ.17: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಮತ್ತೊಮ್ಮೆ ಜಮ್ಮು-ಕಾಶ್ಮೀರದ ವಿಷಯವನ್ನೆತ್ತಿದ ಪಾಕಿಸ್ತಾನಕ್ಕೆ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಸರಿಯಾಗಿ ಝಾಡಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಅಸಂಖ್ಯಾತ ಗಡಿಯಾಚೆಯ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿರುವ ದೇಶವು ಕಾಶ್ಮೀರಿಗಳ ಪರ ಹೋರಾಟಗಾರ ಎಂಬ ಸೋಗು ಧರಿಸಿರುವುದು ವ್ಯಂಗ್ಯವೇ ಸರಿ ಎಂದು ಅವರು ಕುಟುಕಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿನ ಬೆಳವಣಿಗೆಗಳಿಂದಾಗಿ ಡಿಸೆಂಬರ್‌ನಲ್ಲಿ ಎಪಿಎ ಅಧಿವೇಶನವನ್ನು ಆಯೋಜಿಸಲು ತನಗೆ ಸಾಧ್ಯವಿಲ್ಲ ಎಂದು ಪಾಕಿಸ್ತಾನವು ಸರ್ಬಿಯಾದಲ್ಲಿ ನಡೆದ ಅಂತರ-ಸಂಸದೀಯ ಒಕ್ಕೂಟದ ಸಮಾವೇಶದಲ್ಲಿ ಹೇಳಿತ್ತು.

ಸಮಾವೇಶದಲ್ಲಿ ಭಾರತೀಯ ನಿಯೋಗದ ಸದಸ್ಯರಾಗಿ ಪಾಲ್ಗೊಂಡಿದ್ದ ತರೂರ್,ಅಲ್ಲಿ ತನ್ನ ಭಾಷಣದ ವೀಡಿಯೊ ಕ್ಲಿಪ್‌ನೊಂದಿಗೆ,ಪಾಕಿಸ್ತಾನಿ ನಿಯೋಗದ ನಿಂದಾತ್ಮಕ ಹೇಳಿಕೆಗಳಿಗೆ ಭಾರತೀಯ ನಿಯೋಗದ ಪರವಾಗಿ ಉತ್ತರಿಸುವುದು ತನ್ನ ಕರ್ತವ್ಯವಾಗಿತ್ತು ಎಂದು ಟ್ವೀಟಿಸಿದ್ದಾರೆ.

ಪಾಕಿಸ್ತಾನದ ಹೇಳಿಕೆಗಳನ್ನು ನಿಂದಾತ್ಮಕ ಕೆಸರೆರಚಾಟ ಎಂದು ಬಣ್ಣಿಸಿದ ತರೂರ್,‘ ನಾವು ನಮ್ಮ ಹೋರಾಟಗಳನ್ನು ಪ್ರಜಾಸತ್ತಾತ್ಮಕವಾಗಿ ನಡೆಸುತ್ತೇವೆ ಮತ್ತು ಗಡಿಯಾಚೆಯಿಂದ ಮಧ್ಯಪ್ರವೇಶದ ಅಗತ್ಯ ನಮಗಿಲ್ಲ,ಅದನ್ನು ನಾವು ಸ್ವಾಗತಿಸುವುದೂ ಇಲ್ಲ ’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News