ಅಖಿಲ ಭಾರತ ಅಂತರ ವಿವಿ ಮಹಿಳಾ ಸ್ವಾಶ್ ಟೂರ್ನಿ: ಮತ್ತೆ ಮದರಾಸ್ ವಿವಿ ಚಾಂಪ್ಯನ್; ಮಾಹೆ ರನ್ನರ್ ಅಪ್

Update: 2019-10-18 13:58 GMT

ಮಣಿಪಾಲ, ಅ.18: ಕಳೆದ ವರ್ಷದ ಫೈನಲ್‌ನ ಮರು ಪ್ರದರ್ಶನದಂತೆ ಕಂಡುಬಂದ 2019-20ನೇ ಸಾಲಿನ ಅಖಿಲ ಭಾರತ ಅಂತರ ವಿವಿ ಮಹಿಳಾ ಸ್ಕ್ವಾಶ್ ರ್ಯಾಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಮದರಾಸು ವಿವಿ ತಂಡ, ಆತಿಥೇಯ ಮಾಹೆ ವಿವಿ ತಂಡವನ್ನು 3-0 ನೇರ ಅಂತರದಿಂದ ಪರಾಭವ ಗೊಳಿಸುವ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಈ ಮೂಲತ ಮಾಹೆ ಮಹಿಳಾ ತಂಡ ಸತತ ಎರಡನೇ ವರ್ಷವೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ) ಆಶ್ರಯ ದಲ್ಲಿ ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನಕ್ಕೆ ನಡೆದ ಹೋರಾಟದಲ್ಲಿ ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲಾ ವಿವಿ ತಂಡ, ಪುಣೆಯ ಸಾವಿತ್ರಿ ಬಾಯಿ ಪುಲೆ ವಿವಿಯನ್ನು 3-1ಅಂತರದಿಂದ ಪರಾಭವಗೊಳಿಸಿತು. ಪುಣೆ ತಂಡ ನಾಲ್ಕನೇ ಸ್ಥಾನಿಯಾಯಿತು.

ಬಲಿಷ್ಠ ತಂಡವಾಗಿರುವ ಮದರಾಸು ವಿವಿ ಮಹಿಳೆಯರು ಫೈನಲ್‌ನಲ್ಲಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿ ಅಜೇಯವಾಗುಳಿಯಿತು. ಓರ್ವ ಅಂತಾರಾಷ್ಟ್ರೀಯ ಆಟಗಾರ್ತಿ ಹಾಗೂ ಚೆನ್ನೈ ಸ್ವಾಶ್ ಅಕಾಡೆಮಿಯ ಆಟಗಾರ್ತಿಯರನ್ನು ತಂಡ ದಲ್ಲಿ ಹೊಂದಿದ್ದ ಮದರಾಸು ವಿವಿ, ಆಟದ ಎಲ್ಲಾ ವಿಭಾಗಗಳಲ್ಲೂ ಸ್ಪಷ್ಟ ಮೇಲುಗೈಯನ್ನು ಹೊಂದಿತ್ತು.

ಕಳೆದ ವರ್ಷವೂ ಫೈನಲ್‌ನಲ್ಲಿ ಇದೇ ತಂಡಕ್ಕೆ ಶರಣಾಗಿದ್ದ ಮಾಹೆ ಆಟಗಾರ್ತಿಯರು, ಇಲ್ಲೂ ಬಲಿಷ್ಠ ಎದುರಾಳಿಗೆ ಪ್ರತಿರೋಧ ತೋರಲಾರದೇ ಹೋದರು. ಮೂರನೇ ಪಂದ್ಯವನ್ನಾಡಿದ ಸುಕ್ರಿತಾ ಅವರು ತನ್ನ ಎದುರಾಳಿ ಕೀರ್ತಿಕಾ ಜೆ.ಎಸ್.ಗೆ ಸ್ವಲ್ಪ ಮಟ್ಟಿನ ಪ್ರತಿರೋಧ ಒಡ್ಡಲು ಪ್ರಯತ್ನಿಸಿದರೂ, ಅನುಭವಿ ಕೀರ್ತಿಕಾ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.

ಮೊದಲ ಪಂದ್ಯದಲ್ಲಿ ಮದರಾಸು ವಿವಿಯ ಶಿವಾನಿ ವಿ. ಅವರು ಮಾಹೆಯ ಆಯಾನ್‌ರನ್ನು 11-4,9-11,11-4,11-4ರಿಂದ ಹಿಮ್ಮೆಟ್ಟಿಸಿದರೆ, ಎರಡನೇ ಪಂದ್ಯದಲ್ಲಿ ರತಿಕಾ ಎಸ್. ಅವರು ಮುಸ್ಕಾನ್‌ರನ್ನು 11-2,11-0, 11-0ರಿಂದ ಏಕಪಕ್ಷೀಯವಾಗಿ ಮಣಿಸಿದರು.ಮೂರನೇ ಪಂದ್ಯದಲ್ಲಿ ಕೀರ್ತಿಕಾ ಜೆ.ಎಸ್., ಸುಕ್ರಿತಾರನ್ನು 11-7,11-5,11-4ರಿಂದ ಸೋಲಿಸಿ ತಂಡಕ್ಕೆ ಪ್ರಶಸ್ತಿಯನ್ನು ಖಚಿತಪಡಿಸಿದರು.
ಕೊನೆಯಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News